ಶೃಂಗೇರಿ ಕ್ಷೇತ್ರದ ಎಲ್ಲ ರಸ್ತೆಗಳೂ ಹೊಂಡ, ಗುಂಡಿಗಳು ಬಿದ್ದಿದ್ದು , ಶಾಸಕರು ಕೂಡಲೇ ಹೊಂಡ ಗುಂಡಿಗಳನ್ನ ಮುಚ್ಚಿಸದಿದ್ದರೆ ಮುಂದೆ ತೀವ್ರ ರೀತಿಯಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರುಣ್ ಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಅವರು ಬಿ.ಎಚ್.ಕೈಮರ ಸಮೀಪದ ಮುಖ್ಯರಸ್ತೆಯಲ್ಲಿ ರಸ್ತೆಯ ಹೊಂಡ ಗುಂಡಿ ಮುಚ್ಚುವಂತೆ ರಸ್ತೆ ತಡೆ ಹಾಗೂ ಹೊಂಡಗಳಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಶಾಸಕರು ಗುಣಮಟ್ಟದ ರಸ್ತೆ ಮಾಡುವುದಾಗಿ ಭರವಸೆ ನೀಡಿದ್ದರು. ಗುಣಮಟ್ಟದ ರಸ್ತೆ ಮಾಡಿದ್ದರೆ ಇಷ್ಟು ಬೇಗ ಹೊಂಡಗಳು ಬೀಳುತ್ತಿರಲಿಲ್ಲ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ತೆರಿಗೆ ಜಾಸ್ತಿ ಮಾಡಿ ಹಣ ಹೊಂದಾಣಿಕೆ ಮಾಡಲಾಗಿದೆ. ಅಭಿವೃದ್ಧಿಗೆ ಇಟ್ಟ ಹಣದಿಂದ ರಸ್ತೆ ಗುಂಡಿಗಳನ್ನು ಮುಚ್ಚಬೇಕಾಗಿತ್ತು. ಹೊಂಡ, ಗುಂಡಿಗಳನ್ನು ಮುಚ್ಚದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಅದೇ ರೀತಿ ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಂಗಾಪುರದಂತೆ ರಸ್ತೆ ಮಾಡುತ್ತೇವೆ ಎಂದಿದ್ದರು. ಈಗ ರಸ್ತೆ ಗುಂಡಿಯೇ ಮುಚ್ಚುತ್ತಿಲ್ಲ. ಆದಷ್ಟು ಬೇಗ ರಸ್ತೆಯ ಗುಂಡಿ ಮುಚ್ಚಿ ಅಪಘಾತ ತಪ್ಪಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಹಾಗೆ ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್ ಮಾತನಾಡಿ, ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ರಸ್ತೆಗಳ ಹೊಂಡ ಮುಚ್ಚುವಂತೆ ಪ್ರತಿಭಟನೆ ನಡೆಸಲಾಗಿದೆ. ರಸ್ತೆ ತುಂಬ ಹೊಂಡ ಬಿದ್ದಿರುವುದರಿಂದ ಶಿವಮೊಗ್ಗಕ್ಕೆ ರೋಗಿಗಳನ್ನು ಕರೆದುಕೊಂಡು ಹೋಗಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆ. ಶಾಸಕರು ಕ್ಷೇತ್ರದ ಎಲ್ಲ ರಸ್ತೆಗಳಲ್ಲಿ ಓಡಾಡಿದರೆ ರಸ್ತೆಯ ಹೊಂಡಗಳು ಕಾಣಿಸುತ್ತವೆ. ರಸ್ತೆಗೆ ಬಂದರೆ ಹೊಂಡ, ತೋಟಕ್ಕೆ ಹೋದರೆ ಆನೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಈ ವೇಳೆ ಎಂ ಎನ್ ನಾಗೇಶ್, ಪ್ರೀತಂ, ಬಿಜೆಪಿ ಮುಖಂಡ ಪಿ.ಕೆ.ಆಂಟೋನಿ, ಎಸ್ ಎಂ ಕಾಂತರಾಜು, ಎ ಬಿ ಮಂಜುನಾಥ್, ಎಚ್.ಡಿ.ಲೋಕೇಶ್, ಶ್ರೀನಾಥ್, ಸುರಭಿ ರಾಜೇಂದ್ರ, ಪ್ರವೀಣ್, ಪ್ರಸನ್ನ, ಜಗದೀಶ್ ಸೇರಿ ಹಲವರು ಉಪಸ್ಥಿತರಿದ್ದರು.
ವರದಿ: ವಿಠಲ್ ಶೃಂಗೇರಿ
7676798969
