ಚಿಕ್ಕಮಗಳೂರು: ಮನೆ, ಬೀದಿ, ಇಡೀ ಊರನ್ನು ಶುಚಿಯಾಗಿಟ್ಟುಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಕಾನೂನು ತಿಳುವಳಿಕೆ ಮೂಲಕ ಬಿತ್ತುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಕಾನೂನು ಸೇವಾ ಪ್ರಾಧಿಕಾರ, ಪುರಸಭಾ ಆಡಳಿತ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಗೆ ಕರ್ನಾಟಕ ಉಪಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೆ.ಎನ್.ಫಣೀಂದ್ರ ಅವರು ಕರೆ ನೀಡಿದರು.
ನಗರಾಭಿವೃದ್ಧಿ ಇಲಾಖೆ, ನಗರಸಭೆ ಆಶ್ರಯದಲ್ಲಿ ಸ್ವಚ್ಛೋತ್ಸವ ಕಾರ್ಯಕ್ರಮದಡಿ ಸೆಪ್ಟಂಬರ್ 17 ರಿಂದ ಅಕ್ಟೋಬರ್ ಎರಡರವರೆಗೆ ನಡೆಯಲಿರುವ ಸ್ವಚ್ಛತೆಯೇ ಸೇವೆಯಡಿ ಆಯೋಜಿಸಿದ್ದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್‌ವರೆಗೆ ಜಾಥಾವನ್ನು ಇಂದು ಬೆಳಿಗ್ಗೆ ತಾಲ್ಲೂಕು ಕಚೇರಿ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಗಂಟೆ ಕಾಲ ಎಲ್ಲರೂ ಸೇರಿ ನಡೆಸುತ್ತಿರುವ ಶ್ರಮದಾನವಿದು. ಹಾಗೆಂದು ಸ್ವಚ್ಛತಾ ಆಂದೋಲನ ಅಕ್ಟೋಬರ್ ಎರಡಕ್ಕೆ ಮುಕ್ತಾಯವಾಗಬಾರದು; ಆಡಳಿತ ವ್ಯವಸ್ಥೆಗಳು ಈ ವಿಚಾರದಲ್ಲಿ ಕಟಿಬದ್ಧವಾಗಿ ಕಾರ್ಯ ನಿರ್ವಹಿಸಬೇಕು. ಈ ಆಂದೋಲನ ಹಳ್ಳಿ ಹಳ್ಳಿಯಲ್ಲೂ ಜನಾಂದೋಲನವಾಗಿ ರೂಪುಗೊಳ್ಳಬೇಕು. ಎಲ್ಲೆಡೆ ಕೆರೆಕಟ್ಟೆಯನ್ನು ಶುಚಿಯಾಗಿ ಉಳಿಸಿಕೊಂಡರೆ ನಮ್ಮ ದೇಶಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.
ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಮುಖ್ಯವಾಗಿ ಬೇಕಾಗಿರುವುದು ಸ್ವಚ್ಛತೆ. ಜನರಲ್ಲಿ ಕೂಡ ಈ ಬಗ್ಗೆ ಸಾಮಾಜಿಕ ಕಳಕಳಿಯಾಗಲಿ, ಜಾಗೃತಿಯಾಗಲಿ, ತಿಳುವಳಿಕೆಯಾಗಲಿ ಇಲ್ಲ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಜನರನ್ನು ಒಗ್ಗೂಡಿಸಿ ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಅವರು ಮಾತನಾಡಿ, ಈ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕೆಂದು ಸಂಕಲ್ಪ ಮಾಡಿದ್ದು, ಪೌರ ಕಾರ್ಮಿಕರು ಈ ವಿಚಾರದಲ್ಲಿ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ. ಸ್ವಚ್ಛ ಭಾರತ್ ಯೋಜನೆಯಡಿ ಇಡೀ ನಗರವನ್ನು ಶುಚಿಯಾಗಿಟ್ಟುಕೊಳ್ಳುವುದಕ್ಕೆ ನಾವೆಲ್ಲ ಪಣತೊಡುವುದಾಗಿ ತಿಳಿಸಿದರು.
ಪೌರಾಯುಕ್ತ ಬಿ.ಸಿ.ಬಸವರಾಜು ಮಾತನಾಡಿ, ದೇಶಾದ್ಯಂತ ಸ್ವಚ್ಛತಾ ಇ ಸೇವಾ ಕಾರ್ಯಕ್ರಮದಡಿ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರು ನಗರದಿಂದ ಅಗತ್ಯವಿರುವ ವಸ್ತುಗಳನ್ನು ಖರೀದಿಸುವ ಕಾಲಕ್ಕೆ ಪ್ಲಾಸ್ಟಿಕ್ ಚೀಲಗಳನ್ನು ಅವಲಂಬಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಬಗ್ಗೆ ಜನರಲ್ಲಿ ಮಾನಸಿಕತೆ ಬೆಳೆಯಬೇಕು ಎಂದು ತಿಳಿಸಿದರು.
ರಾಜ್ಯಕ್ಕೆ ಮಾದರಿಯಾದ ಕಸದ ವಿಲೇವಾರಿ ಘಟಕವನ್ನು ಸ್ಥಾಪಿಸುತ್ತಿದ್ದು, ಸಾರ್ವಜನಿಕರು ಹಲವರು ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಅಲ್ಲಲ್ಲಿ ಎಸೆಯುವ ಕೆಲಸ ಮಾಡುತ್ತಿದ್ದಾರೆ. ಜನರು ಹಸಿಕಸ ಹಾಗೂ ಒಣಕಸವನ್ನು ವಿಂಗಡಿಸುವ ಮೂಲಕ ಕಸ ವಿಲೇವಾರಿ ಮಾಡುವ ಆಟೋ ಟಿಪ್ಪರ್‌ಗಳಿಗೆ ಹಾಕಬೇಕೆಂದು ಸಲಹೆ ನೀಡಿದರು. ರಾಜ್ಯಕ್ಕೆ ಮಾದರಿಯಾದ ಗ್ರಾಮಸ್ಥರಿಗೆ ಸಮಸ್ಯೆಯಾಗದಂತೆ ಸ್ಥಳದಲ್ಲೇ ವಿಂಗಡಿಸಿ ವಿಲೇವಾರಿ ಮಾಡಲಾಗುವುದು.
ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ. ಉಪಲೋಕಾಯುಕ್ತರ ಜೊತೆ ಆಗಮಿಸಿರುವ ಇತರ ನ್ಯಾಯಾಧೀಶರಾದ ಪೃಥ್ವಿರಾಜ್ ವರ್ಣೇಕರ್, ಶಿವಾಜಿ ಅನಂತ್ ನಲವಾಡೆ, ಹಿರಿಯ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ, ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಪಿ.ಬಿ.ಸ್ನೇಹಾ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ತಿರುಮಲೇಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉಪಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ ಅವರು ಕಸಪೊರಕೆ ಹಿಡಿದು ಕಸಗುಡಿಸಿ ಚೀಲಗಳಿಗೆ ಕಸವನ್ನು ಹಾಕುವ ಮೂಲಕ ಸಾರ್ವಜನಿಕರಿಗೆ ಸಂದೇಶ ರವಾನಿಸಿದರಲ್ಲದೆ, ನಗರಸಭೆಯಿಂದ ಮನೆ ಮನೆಗಳಿಗೆ ಬಟ್ಟೆ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
