Monday, February 9, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಡಾ. ಬಿ.ಎಂ.ಪುಟ್ಟಯ್ಯಗೆ ಸಾಹಿತ್ಯಶ್ರೀ ಪ್ರಶಸ್ತಿ!

ಚಿಕ್ಕಮಗಳೂರು: ಡಾ. ಬಿ.ಎಂ.ಪುಟ್ಟಯ್ಯಗೆ ಸಾಹಿತ್ಯಶ್ರೀ ಪ್ರಶಸ್ತಿ!

ಚಿಕ್ಕಮಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ, ಚಿಕ್ಕಮಗಳೂರು ಜಿಲ್ಲೆಯ ಸೃಜನಾತ್ಮಕ ಸಾಹಿತಿಗಳಲ್ಲಿ ಒಬ್ಬರಾದ ಡಾ. ಬಿ.ಎಂ ಪುಟ್ಟಯ್ಯ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ 2024ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದ್ದಾರೆ.

ಡಾ. ಬಿ.ಎಂ. ಪುಟ್ಟಯ್ಯ, ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾಗಿ ಮತ್ತು ಕುಪ್ಪಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅನಕ್ಷರಸ್ಥ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ಪುಟ್ಟಯ್ಯನವರು ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಕವನಗಳನ್ನು ಬರೆಯುತ್ತಿದ್ದರು. ಜೊತೆಗೆ ಉತ್ತಮ ಚರ್ಚಾಪಟುವಾಗಿದ್ದರು. ಆಣೂರು ಪ್ರೌಢಶಾಲೆ 10ನೇ ತರಗತಿ ಉತ್ತೀರ್ಣರಾದ ಬಳಿಕ ಚಿಕ್ಕಮಗಳೂರಿನ ಐ.ಡಿ.ಎಸ್.ಜಿ. ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ.ಯಿಂದ ಪದವಿಯವರೆಗೆ ಅಭ್ಯಾಸ ಮಾಡಿ, ಮುಂದೆ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕನ್ನಡ ಎಂ.ಎ.ಯಲ್ಲಿ ಪ್ರಥಮ ರ್‍ಯಾಂಕ್ ಪಡೆದುಕೊಂಡವರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ `ಅಲಕ್ಷಿತ ವಚನಕಾರರ ಲೋಕದೃಷ್ಟಿ’ ವಿಷಯ ಕುರಿತು ಎಂ.ಫಿಲ್. ಪದವಿ ಮತ್ತು `ಕನ್ನಡ ದಲಿತ ಸಾಹಿತ್ಯ ಮತ್ತು ಪ್ರತಿಸಂಸ್ಕೃತಿ’ ವಿಷಯ ಕುರಿತು ಪಿಎಚ್.ಡಿ. ಪದವಿ ಪಡೆದು ಅದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ನೇಮಕವಾದರು. ಕಳೆದ 30 ವರ್ಷಗಳಿಂದ ಪ್ರಾಧ್ಯಾಪಕರಾಗಿ, ಹಿರಿಯ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ,

ದೇವನೂರು ಮಹಾದೇವ. ಕಾಲ್ನಡಿಗೆ. ಕರಡು. ಮುಖಾಮುಖಿ ಇವರ ವಿಮರ್ಶಾ ಕೃತಿಗಳು.ಅಲಕ್ಷಿತಾ ವಚನಕಾರರ ಲೋಕ ದೃಷ್ಟಿ. ಆತ್ಮಕಥೆಗಳಲ್ಲಿ ಕರ್ನಾಟಕದ ಕಥೆ ಇವರ ಸಂಶೋಧನಾ ಕೃತಿಗಳಾಗಿವೆ. ಸಾವು, ಒಂದು ಚಿಂತನೆ, ದಲಿತರು ಮತ್ತು ಭೂಮಿಯ ಪ್ರಶ್ನೆ, ಹರಿಶ್ಚಂದ್ರ ಚಾರಿತ್ರ, ಸತ್ಯದ ತೊಡಕು, ತಾತ್ವಿಕ ಆಯಾಮಗಳು, ಶ್ರಮಭಾಷೆ, ಕಾಲಿಡಿಗೆ, ಒಂದನೇ ತರಗತಿಯಿಂದಲೇ ಉರುಳು, ಜಾತಿ ವಿಶ್ಲೇಷಣೆಯ ಸಮಸ್ಯೆ, ಬರಿ ನಿದ್ದೆಯಲ್ಲವೋ ಅಣ್ಣ, ವಡ್ಡಾರಾಧನೆ, ಸಾಂಸ್ಕೃತಿಕ ಮುಖಾಮುಖಿ. ಧರ್ಮಾಮೃತ, ಆದಿಪುರಾಣ, ದಲಿತ ಸಾಹಿತ್ಯ ಸಂಪುಟ, ಬೆಂಕಿಯ ಮಳೆ ಹೀಗೆ ವಿಚಾರ ವಿಮರ್ಶಾ ಕೃತಿಗಳು, ಸೃಜನಶೀಲ ಕೃತಿಗಳು, ಸಂಪಾದನಾ ಕೃತಿಗಳನ್ನು ಹೊರತಂದು ಸಾಹಿತ್ಯ ಲೋಕಕ್ಕೆ ಹೊಸ ನೋಟವನ್ನು ಕಟ್ಟಿಕೊಟ್ಟಿದ್ದಾರೆ.

ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ವಿಚಾರ ಪೂರ್ಣ ಪ್ರಬಂಧಗಳನ್ನು ಮಂಡಿಸಿ, ೩೫೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಲೆನಾಡಿನ ತವರೂರು ಚಿಕ್ಕಮಗಳೂರು ತಾಲೂಕಿನ ಬಸಾಪುರ ಗ್ರಾಮದ ಕುಳುವಾಡಿ ಮಂಜಯ್ಯ ಮತ್ತು ಸಿದ್ದಮ್ಮ ದಂಪತಿಗಳ ಪುತ್ರರಾದ ಡಾ. ಬಿ ಎಂ ಪುಟ್ಟಯ್ಯನವರು ಅತ್ಯಂತ ಕಡು ಬಡತನದಲಿ ಹುಟ್ಟಿ , ಶಿಕ್ಷಣವನ್ನು ಪಡೆದು, ಮಹಾಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿ ಪಡೆದು, ವಿಶ್ವವಿದ್ಯಾಲಯದಲ್ಲಿ ಹಿರಿಯ ಅಧ್ಯಾಪಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಾ, ಸುಮಾರು 21 ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

ಡಾ. ಬಿ. ಎಂ ಪುಟ್ಟಯ್ಯನವರ ಈ ಎಲ್ಲ ಸಾಹಿತ್ಯದ ಕೃಷಿಯನ್ನು ಪರಿಗಣಿಸಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಜಿಲ್ಲೆಯ ಅನೇಕ ಸಾಹಿತ್ಯಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!