ಎನ್ ಆರ್ ಪುರ: ಉದ್ಯಮಿ ಹಾಗೂ ಸಮಾಜಸೇವಕ ವಿಶ್ವನಾಥ್ ಗದ್ದೆಮನೆಯವರು ಕಾಡಾನೆ ದಾಳಿಗೆ ಮೃತಪಟ್ಟವರ ಕುಟುಂಬಗಳಿಗೆ ತಮ್ಮ ಸಹಾಯ ಮಾಡಿದ್ದಾರೆ. ತಾಲೂಕಿನ ಸೀತೂರು ಗ್ರಾಮದ ಕೆರೆಗದ್ದೆಯಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ಉಮೇಶ್ ಅವರ ಮನೆಗೆ ತೆರಳಿ ಅವರ ಪತ್ನಿ ಪ್ರೇಮ ಅವರಿಗೆ 1 ಲಕ್ಷ ರೂ.ಗಳ ಚೆಕ್‌ನ್ನು ವಿತರಿಸಿದರು.

ನಂತರ ಕಾಡಾನೆ ದಾಳಿಗೆ ಬಲಿಯಾದ ತಾಲೂಕಿನ ಮಡಬೂರಿನ ಎಕ್ಕಡಬೈಲು ನಿವಾಸಿ ಏಲಿಯಾಸ್ ಅವರ ಕುಟುಂಬ, ಬನ್ನೂರು ಗ್ರಾಮದ ಅಂದುವಾನಿಯಲ್ಲಿ ಆನೆ ದಾಳಿ ಸಂತ್ರಸ್ತ ಕುಟುಂಬಕ್ಕೆ ತಲಾ 1 ಲಕ್ಷ ರೂ.ಗಳ ಚೆಕ್ ವಿತರಿಸಿದರು. ನಂತರ ಖಾಂಡ್ಯ ಹೋಬಳಿ ಅಂಡವಾನೆ ವಾಸಿಯಾಗಿರುವ ರಚನ್ ಕೃಷ್ಣ ಅವರು ಕಾಡುಕೋಣ ದಾಳಿಯಿಂದ ಗಾಯಗೊಂಡಿದ್ದು, ಮನೆಯ ದುಡಿಮೆಯ ಆಧಾರ ಸ್ತಂಭವಾಗಿದ್ದರು.ಇವರ ಮನೆಗೆ ಭೇಟಿ ನೀಡಿದ ವಿಶ್ವನಾಥ್ ಗದ್ದೆಮನೆಯವರು ರಚನ್ ಕೃಷ್ಣ ಮತ್ತು ಅವರ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿದರು.

ಕಾಡಾನೆಗಳು ನಾಡಿಗೆ ಬಾರದಂತೆ ಸರ್ಕಾರವು ಶಾಶ್ವತ ಪರಿಹಾರ ಮಾಡಬೇಕು ಎಂದು ಗದ್ದೆಮನೆ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ಸಲಹೆ ನೀಡಿದ್ದಾರೆ.ಕಾಡಾನೆಗಳು ಹಾಗೂ ಇತರೆ ಕಾಡು ಪ್ರಾಣಿಗಳು ನಾಡಿಗೆ ಬರದಂತೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವಂತಹ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.ಆ ಮೂಲಕ ಕಾಡುಪ್ರಾಣಿಗಳು ಹಾಗೂ ಮಾನವನ ಸಂಘರ್ಷವನ್ನು ಶಾಶ್ವತವಾಗಿ ತಡೆಯುವಲ್ಲಿ ಸರ್ಕಾರವು ಗಮನ ನೀಡಬೇಕು. ಕಾಡಿನಲ್ಲಿ ಆನೆಗಳಿಗೆ,ಕಾಡು ಪ್ರಾಣಿಗಳಿಗೆ ಸೂಕ್ತ ಆಹಾರದ ಕೊರತೆಯುಂಟಾಗಿದೆ ಇದರಿಂದ ಕಾಡಾನೆಗಳು ಆಹಾರ ಹುಡುಕಿ ನಾಡಿಗೆ ಬರುತ್ತಿವೆ. ಈಗಾಗಲೇ ತಾಲ್ಲೂಕಿನಲ್ಲಿ ಕಾಡಾನೆಗಳ ದಾಳಿಯಿಂದ ನಾಲ್ವರು ಮೃತಪಟ್ಟಿದ್ದು ಮುಂದೆ ಈ ರೀತಿ ಘಟನೆಗಳು ಮರುಕಳಿಸಬಾರದು. ಸರ್ಕಾರವು ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ತಲಾ 50 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಲೆನಾಡು ರೈತ ಹಿತರಕ್ಷಣಾ ಸಮಿತಿಯ ಶೃಂಗೇರಿ ಕ್ಷೇತ್ರದ ಅಧ್ಯಕ್ಷ ಎಂ.ಎನ್.ನಾಗೇಶ್, ಸೀತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಉಪೇಂದ್ರ,ಹೆಚ್ ಇ ದಿವಾಕರ,ಮಲೆನಾಡು ಹಿತರಕ್ಷಣಾ ಸಮಿತಿ ಸದಸ್ಯ ಸತೀಶ್ ಗದ್ದೆಮನೆ ಸೇರಿದಂತೆ ಊರಿನ ಗ್ರಾಮಸ್ಥರು,ಪ್ರಮುಖರು, ಗದ್ದೆಮನೆ ಚಾರಿಟೆಬಲ್ ಟ್ರಸ್ಟ್‌ನ ಪದಾಧಿಕಾರಿಗಳು,ವಿಶ್ವನಾಥ್ ಗದ್ದೆಮನೆ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

ವರದಿ: ವಿಠಲ್ ಶೃಂಗೇರಿ
7676798969
