ಚಿಕ್ಕಮಗಳೂರು: ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಇಂದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿದರು. ಈ ವೇಳೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು. ಹಾಗೆ ಶೃಂಗೇರಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹೋರಾಟ ಸಮಿತಿಯಿಂದ ಮನವಿ ಪತ್ರ ಕೂಡ ಸಲ್ಲಿಸಲಾಯಿತು.
ಹಾಗೆ ಈ ಬಗ್ಗೆ ಮಾತನಾಡಿದ ಸಚಿವರು, ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರಕ್ಕೆ 3 ಬಾರೀ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸಮಸ್ಯೆಯನ್ನೂ ಆದಷ್ಟು ಬೇಗ ಪರಿಹರಿಸಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಸುನಿಲ್ ಮಾತೊಳ್ಳಿ, ದಿನೇಶ್ ಹೆಗ್ಡೆ, ನೂತನ ಕುಮಾರ್, ಅರುಣ್ ಕುಮಾರ್, ಭರತ್ , ಪ್ರದೀಪ ಕೂಳೆಗದ್ದೆ, ದೇವೇಂದ್ರ, ನಾಗರಾಜ್, ರೂಪೇಶ್, ಅರುಣ್, ಸುಧಾಕರ್ ಉಪಸ್ಥಿತರಿದ್ದರು.
ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಕಾಡಿನೊಳಗಿರುವ ಜನವಸತಿಗಳನ್ನು ಸ್ಥಳಾಂತರಿಸುವ ಕುರಿತಂತೆ ಪರಿಶೀಲಿಸಲಾಗುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾರ್ಕಳ ವ್ಯಾಪ್ತಿಯ ನಿವಾಸಿಗಳ ಪುನರ್ಸವತಿ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ 2005ರ ಸರ್ಕಾರಿ ಸುತ್ತೋಲೆ ಪುನರ್ ಪರಿಶೀಲಿಸಿ ಮರು ಆದೇಶ ಮಾಡುವಂತೆ ಕೋರಿ ಶಾಸಕ ಟಿ.ಡಿ. ರಾಜೇಗೌಡ ನೇತೃತ್ವದ ನಿಯೋಗದಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಹಿಂದೆ ವನ್ಯಜೀವಿಗಳ ಕಳ್ಳಬೇಟೆ ನಡೆಯುತ್ತಿತ್ತು. ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇದನ್ನು ನಿಯಂತ್ರಿಸಿದ್ದು, ಉತ್ತಮ ಪರಿಸರವಿರುವುದರಿಂದ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಹೆಚ್ಚುತ್ತಿರುವ ವನ್ಯಜೀವಿಗಳ ಸಂಖ್ಯೆಗೆ ಅನುಗುಣವಾಗಿ ವನ ಪ್ರದೇಶ ಹೆಚ್ಚುತ್ತಿಲ್ಲ ಇದರಿಂದ ಸಮಸ್ಯೆ ಉಲ್ಬಣಿಸುತ್ತಿದೆ ಎಂದರು.
1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಇದ್ದ ಹುಲಿಗಳ ಸಂಖ್ಯೆ ಇಂದು 170ಕ್ಕೂ ಹೆಚ್ಚಾಗಿದೆ, ಹೀಗಾಗಿ ದುರ್ಬಲ ಹುಲಿಗಳು ಕಾಡಿನಿಂದ ಹೊರಬರುತ್ತಿವೆ. ಹಗಲು ರಾತ್ರಿ ಇಲಾಖೆ ಶ್ರಮಿಸುತ್ತಿದ್ದರು, ಮಾನವ-ವನ್ಯಜೀವಿ ಸಂಘರ್ಷದ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಹೆಚ್ಚಿಸಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಶೀಘ್ರವೇ ಸಭೆ ನಡೆಯಲಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.
ಅರಣ್ಯದೊಳಗಿರುವ ಜನವಸತಿಗಳನ್ನು ಸ್ಥಳಾಂತರದಿಂದ ಅರಣ್ಯವಾಸಿಗಳು ಮತ್ತು ಅವರ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ. ಜೊತೆಗೆ ಮಾನವ-ವನ್ಯಜೀವಿ ಸಂಘರ್ಷವೂ ಕಡಿಮೆ ಆಗುತ್ತದೆ. ಸ್ಥಳಾಂತರಕ್ಕೆ ಪರಿಹಾರ ನೀಡಬೇಕಾಗುತ್ತದೆ. ಇದನ್ನು ಒಂದೇ ಬಾರಿಗೆ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಮಾಡಬೇಕಾಗುತ್ತದೆ. ಬಜೆಟ್ ನಲ್ಲಿ ಇದಕ್ಕೆ ಹಣ ಮೀಸಲಿಟ್ಟರೆ ಇದು ಸಾಧ್ಯವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
