ಚಿಕ್ಕಮಗಳೂರು: ನನಗಿಂತ, ನನ್ನ ಜಾತಿಗಿಂತ, ನನ್ನ ಧರ್ಮಕ್ಕಿಂತ ನನ್ನ ದೇಶ ಮೊದಲು ಎನ್ನುವ ರಾಷ್ಟ್ರಭಕ್ತರಿಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ ಈ ಏಕತಾ ನಡಿಗೆ ಸಲ್ಲುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಮೈ ಭಾರತ್ ಕೇಂದ್ರ (ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ) ಕುವೆಂಪು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಘಟಕಗಳ ಸಹಯೋಗದಲ್ಲಿ ನಗರದ ಟೌನ್ ಕ್ಯಾಂಟೀನ್ ಸಮೀಪದಿಂದ ಹೊಸಮನೆ ಬಡಾವಣೆಯ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕದವರೆಗೆ ಆಯೋಜಿಸಲಾಗಿದ್ದ ಏಕತಾ ನಡಿಗೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.
ಇಡೀ ರಾಷ್ಟ್ರದಲ್ಲಿ, ಜಿಲ್ಲೆಯಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಾಜ ಹೆಮ್ಮೆ ಪಡುವ ಏಕತಾ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹರಿದು ಹಂಚಿಹೋಗಿರುವ ಅನೇಕ ರಾಜರುಗಳನ್ನು ಅಗತ್ಯವಿದ್ದಾಗ ದಂಡ ಪ್ರಯೋಗದ ಮೂಲಕವೂ ಒಗ್ಗೂಡಿಸಿ ಭಾರತದ ಏಕತೆಯನ್ನು ಕಾಪಾಡಿದವರು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು. ಈ ಸಂದರ್ಭದಲ್ಲಿ ಅವರ ಹೆಸರು ನೆನಪಿಸಿಕೊಂಡು ಎಲ್ಲರೂ ಏಕತಾ ನಡಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರ ಮೊದಲು ಎನ್ನುವ ಕಲ್ಪನೆಗೆ ಒತ್ತು ಕೊಟ್ಟು ಕೆಲಸ ಮಾಡುವ ಕಾರ್ಯಕ್ರಮ ಇದಾಗಿದೆ ಎಂದರು.
ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಪ್ರಾಸ್ತಾವಿಕ ಮಾತನಾಡಿ, ಈ ಏಕತಾ ನಡಿಗೆ ಕಾರ್ಯಕ್ರಮವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನಾಚರಣೆ ಅಂಗವಾಗಿ ಇದು ರಾಷ್ಟ್ರಾದ್ಯಂತ ನಡೆದಿದ್ದು, `ಒನ್ ನೇಷನ್, ಒನ್ ವಿಷನ್’ ಇತ್ತೀಚಿನ ದಿನಗಳಲ್ಲಿ ಪ್ರಸ್ತುತವಾಗಿದ್ದು, ಪಟೇಲ್ ಅವರ ದೀರ್ಘ ದೃಷ್ಟಿಯನ್ನು ಸಾರುವ ಸಲುವಾಗಿ ಈ ನಡಿಗೆಯಲ್ಲಿ ಅವರ ಧ್ಯೇಯವನ್ನು ಜೀವನವಿಡೀ ಅಳವಡಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಪೌರಾಯುಕ್ತ ಬಿ.ಸಿ.ಬಸವರಾಜ್, ಮುಖಂಡರಾದ ಹೆಚ್.ಸಿ.ಕಲ್ಮರುಡಪ್ಪ, ಬೆಳವಾಡಿ ರವೀಂದ್ರ, ದೀಪಕ್ ದೊಡ್ಡಯ್ಯ, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
