ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಳೆ ದಿನ ಪ್ರಾತಃಕಾಲ 7.29ರ ಶುಭ ವೃಶ್ಚಿಕ ಲಗ್ನದಲ್ಲಿ ದೇವರ ವಾರ್ಷಿಕ ಚಂಪಾ ಷಷ್ಠಿ ಮಹೋತ್ಸವದ ಭವ್ಯ ರಥೋತ್ಸವಕ್ಕೆ ಅದ್ಭುತವಾಗಿ ಚಾಲನೆ ದೊರೆಯಲಿದೆ
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಈ ಉತ್ಸವವು ರಾಜ್ಯದಲ್ಲೇ ಅತೀದೊಡ್ಡ ಉತ್ಸವವಾಗಿಯೂ ಪ್ರಖ್ಯಾತಿ ಪಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಲ್ಲಿನ ಮಲೆಕುಡಿಯ ಆದಿವಾಸಿ ಜನಾಂಗದವರು ಚಂಪಾಷಷ್ಠಿ ವೇಳೆಯಲ್ಲಿ ವಿಶಿಷ್ಟವಾಗಿ ಬೆತ್ತದಿಂದ ಬ್ರಹ್ಮರಥವನ್ನು ನಿರ್ಮಿಸುವುದು ಪಾರಂಪರಿಕ ವಿಶೇಷತೆಯಾಗಿ ಇಂದಿಗೂ ಉಳಿದಿದೆ. ಬೃಹತ್ ಬ್ರಹ್ಮರಥವನ್ನು ಪ್ರತ್ಯೇಕವಾಗಿ ಹಗ್ಗಗಳ ಬಳಕೆ ಇಲ್ಲದೆ ಬರೀ ಬಿದಿರು ಮತ್ತು ಬೆತ್ತದಿಂದ ಕೌಶಲ್ಯಕರವಾಗಿ ನಿರ್ಮಿಸುವುದು ಇದರ ವಿಶಿಷ್ಟತೆ. ಶ್ರೀ ದೇವರ ಬ್ರಹ್ಮ ರಥೋತ್ಸವವೇ ಕುಕ್ಕೆ ಸುಬ್ರಹ್ಮಣ್ಯ ಜಾತ್ರೆಯ ಆಕರ್ಷಣೆ.
ಮಾರ್ಗಶಿರ ಮಾಸದಲ್ಲಿ ಬರುವ ಷಷ್ಠಿಯೇ ಸುಬ್ರಹ್ಮಣ್ಯ ಷಷ್ಠಿ. ಶಿವ ಹಾಗೂ ಪಾರ್ವತಿಯರ ಮಗನಾದ ಕಾರ್ತಿಕೇಯ (ಸುಬ್ರಹ್ಮಣ್ಯ) ಕುಮಾರಧಾರ ನದಿ ತಟದಲ್ಲಿ ನೆಲೆಯಾದ ಸ್ಥಳವೇ ಕುಕ್ಕೆ ಸುಬ್ರಹ್ಮಣ್ಯ. ವರ್ಷಂ ಪ್ರತಿ ನಡೆಯುವ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿಯ ಹಿಂದೆಯೂ ಒಂದು ಪೌರಾಣಿಕ ಹಿನ್ನೆಲೆ ಇದೆ. ಸ್ಕಂದ ಷಷ್ಠಿ ನಂತರ ಬರುವ ಆಚರಣೆಯೇ ಸುಬ್ರಹ್ಮಣ್ಯ ಷಷ್ಠಿ. ಮಾರ್ಗಶಿರ ಮಾಸದಲ್ಲಿ ಬರುವ ಈ ಷಷ್ಠಿ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಎಂದೂ ಪ್ರಸಿದ್ಧಿಯನ್ನು ಪಡೆದಿದೆ.
ಶುಕ್ಲಪಕ್ಷದ ಆರನೇ ದಿನ ಆಚರಿಸಲ್ಪಡುವ ಷಷ್ಠಿ ಹಿಂದೂ ಸಂಪ್ರದಾಯ ಪ್ರಕಾರ ಪ್ರಮುಖವಾದ ಹಬ್ಬ. ಕುಕ್ಕೆಯಲ್ಲಿ ವಿಶೇಷವಾಗಿ ಜಾತ್ರಾ ವೈಭವಕ್ಕೆ ಹಲವು ರಥಗಳೇ ಪ್ರಮುಖ. ಜಾತ್ರಾ ದಿನಗಳಲ್ಲಿ ದಿನವೊಂದಕ್ಕೆ ವಿವಿಧ ರಥಗಳ ಮೂಲಕ ಕುಕ್ಕೆ ಸುಬ್ರಹ್ಮಣ್ಯ ದೇವರು ಭಕ್ತರಿಗೆ ದರ್ಶನ ನೀಡುತ್ತಾರೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಎಳೆಯುವ ಪವಿತ್ರ ಬ್ರಹ್ಮರಥ, ಪಂಚಮಿ ರಥ, ಐದು ಕಲಶವನ್ನೊಳಗೊಂಡ ಚಂದ್ರಮಂಡಲ, ಹೂವಿನ ತೇರು ಮತ್ತು ಒಳಾಂಗಣದ ಬಂಡಿರಥಗಳು ಕ್ಷೇತ್ರದ ಜಾತ್ರೋತ್ಸವಕ್ಕೆ ಮೆರುಗು ನೀಡುತ್ತವೆ.
ಈ ಸಮಯದಲ್ಲಿ ದೇಗುಲದ ಚೆಂಡೆ ವಾದ್ಯ ನಿನಾದಗಳು, ಬಣ್ಣಬಣ್ಣದ ಬಟ್ಟೆಯ ನಿಶಾನಿಗಳು, ಮಕರತೋರಣಗಳು, ಹೂವಿನ ಅಲಂಕಾರಗಳು, ಸತ್ತಿಗೆ, ಓಲರಿಕೊಡೆಗಳು, ಬೆಳ್ಳಿಯ ಪಂಚ ದೀವಟಿಕೆಗಳು, ದೀಪಗಳು ದೇವರ ಉತ್ಸವಕ್ಕೆ ವಿಶೇಷವಾದ ಮೆರುಗುಗನ್ನು ನೀಡುತ್ತದೆ. ದ್ವಾದಶಿಯಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಕುಕ್ಕೆ ಸುಬ್ರಹ್ಮಣ್ಯದ ಜಾತ್ರೆ ಕೊನೆಗೊಳ್ಳುತ್ತದೆ.
ಹೀಗಾಗಿ ಅನೇಕ ಭಕ್ತರು ದೇವರ ದರ್ಶನಕ್ಕಾಗಿ ಆಗಮಿಸಿ, ಭಕ್ತಿ–ಭಾವದಿಂದ ರಥೋತ್ಸವದ ಮಹಿಮೆ ಅನುಭವಿಸಲಿದ್ದಾರೆ.
ಚೇತನ್ ನಾಯ್ಕ್, ಕುಕ್ಕೆ ಸುಬ್ರಹ್ಮಣ್ಯ
9483964639
