ಚಿಕ್ಕಮಗಳೂರು: ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ಡಿಸೆಂಬರ್ 2 ರಿಂದ 4 ರವರೆಗೆ ನಡೆಯಲಿರುವ ದತ್ತ ಜಯಂತಿ ಉತ್ಸವಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಿದ್ದು, ನ್ಯಾಯಾಲಯದ ಸೂಚನೆ ಪ್ರಕಾರವೇ ಪ್ರತಿ ವರ್ಷದಂತೆ ಕಾರ್ಯಕ್ರಮಗಳು ನಡೆಲಿವೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೀಠಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಈಗಾಗಲೇ ಬೇರೆ ಬೇರೆ ಇಲಾಖೆಗಳ ಸಂಯೋಜನೆಯೊಂದಿಗೆ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ವಿಶ್ವಹಿಂದೂಪರಿಷತ್-ಬಜರಂಗದಳದ ಮುಖಂಡರ ಸಭೆ ನಡೆಸಿ ಅಹವಾಲುಗಳನ್ನು ಕೇಳಲಾಗಿದೆ. ನ್ಯಾಯಾಲಯದ ಸೂಚನೆ ಅಡಿಯಲ್ಲೇ ಹಿಂದಿನ ವರ್ಷ ಏನೇನು ಕಾರ್ಯಕ್ರಮಗಳು ನಡೆದಿದ್ದವು ಅದನ್ನೇ ಈ ವರ್ಷವೂ ಮುಂದುವರಿಸಲಾಗುವುದು ಎಂದು ತಿಳಿಸಿದರು.
2022 ರಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ ದತ್ತಪೀಠ ವ್ಯವಸ್ಥಾಪನಾ ಸಮಿತಿಯ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮುಜರಾಯಿ ಕಾಯ್ದೆಯಡಿ ಸರ್ಕಾರವು ಅಪರ ಜಿಲ್ಲಾಧಿಕಾರಿಯವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ ಈ ಹಿನ್ನೆಲೆಯಲ್ಲಿ ಈ ಬಾರಿಯ ದತ್ತ ಜಯಂತಿ ಉತ್ಸವದ ಕಾರ್ಯಕ್ರಮಗಳು ಅವರ ಅಧೀನದಲ್ಲೇ ನಡೆಯಲಿದೆ ಎಂದು ತಿಳಿಸಿದರು.
ಡಿಸೆಂಬರ್ 1 ರಿಂದ 5 ರ ಬೆಳಗ್ಗೆ 6 ಗಂಟೆ ವರೆಗೆ ದತ್ತಪೀಠ ಸೇರಿದಂತೆ ಗಿರಿ ಪ್ರದೇಶದ ತಾಣಗಳಿಗೆ ಪ್ರವಾಸಿಗರ ಭೇಟಿಗೆ ತಾತ್ಕಾಲಿಕ ನಿರ್ಭಂಧ ವಿಧಿಸಲಾಗಿದೆ.ಇದಲ್ಲದೆ ಸಕ್ಟರಲ್ ಮ್ಯಾಜಿಸ್ಟೇಟರ್‌ಗಳ ನೇಮಕ, ಸಿಸಿ ಟಿವಿಗಳ ಅಳವಡಿಕೆಯಮತಹ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದತ್ತಪೀಠದಲ್ಲಿ ಪ್ಲಾಸ್ಟಿಕ್ ನಿಷೇಧ ಇರುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಸದಂತೆ ಕೋರಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ, ಎಸ್ಪಿ ಡಾ.ವಿಕ್ರಮ ಅಮಟೆ ಉಪಸ್ಥಿತರಿದ್ದರು.
