ಎನ್ ಆರ್ ಪುರ: ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊನೋಡಿ ಗ್ರಾಮದ ಹೆಮ್ಮೂರಿನಲ್ಲಿ ಹೆಜ್ಜೇನು ಕಡಿದು ಎಚ್.ಎಲ್. ಪರಮೇಶ್ವರ ಎಂಬುವರು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದ ಘಟನೆ ಗುರುವಾರ ನಡೆದಿದೆ.
ಗುರುವಾರ ಬೆಳಿಗ್ಗೆ 10ಗಂಟೆಗೆ ಪರಮೇಶ್ವರ ಅವರು, ತೋಟಕ್ಕೆ ಹೋಗಿ ವಾಪಾಸ್ ತೋಟದ ಗೇಟ್ ತೆಗೆದು ರಸ್ತೆಗೆ ಬರುತ್ತಿದ್ದಾಗ ಏಕಾಏಕಿ 20ರಿಂದ 25 ಹೆಜ್ಜೇನುಗಳು ದಾಳಿ ಮಾಡಿವೆ. ಮುಖ, ಕೈ, ತಲೆಗೆ ಕಚ್ಚಿದ್ದು, ತೀವ್ರ ಅಸ್ವಸ್ಥರಾದ ಅವರನ್ನು ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
12 ಜನರ ಮೇಲೆ ಹೆಜ್ಜೇನು ದಾಳಿ: ಇದೇ ಸ್ಥಳದಲ್ಲಿ ಮಂಗಳವಾರ ಸಂಜೆ ಗಾರೆ ಕೆಲಸಕ್ಕೆ ಹೋಗಿದ್ದ ಇಬ್ಬರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತು. ಅಲ್ಲದೆ ಆ ಸ್ಥಳಕ್ಕೆ ಬಂದ 10ರಿಂದ 12 ಗ್ರಾಮಸ್ಥರ ಮೇಲೂ ಹೆಜ್ಜೇನು ದಾಳಿ ಮಾಡಿ ಕಚ್ಚಿದೆ. ಅವರು, ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಬಂದು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ. ಈಗ ಆ ರಸ್ತೆಯಲ್ಲಿ ಗ್ರಾಮಸ್ಥರು ಓಡಾಡಲು ಭಯ ಪಡುತ್ತಿದ್ದಾರೆ. ಎಲ್ಲಿಂದ ಹೆಜ್ಜೇನು ಬರುತ್ತಿದೆ ಎಂಬುದು ಪತ್ತೆಯಾಗಿಲ್ಲ.
