Monday, August 10, 2026
Homeಬ್ರೇಕಿಂಗ್ ನ್ಯೂಸ್ಪಕ್ಷಕ್ಕಾಗಿ ಪಟ್ಟ ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ, ಅಧಿವೇಶನ ಮುಗಿದ ಕೂಡಲೇ ಡಿ.ಕೆ. ಶಿವಕುಮಾರ್ ಸಿಎಂ...

ಪಕ್ಷಕ್ಕಾಗಿ ಪಟ್ಟ ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ, ಅಧಿವೇಶನ ಮುಗಿದ ಕೂಡಲೇ ಡಿ.ಕೆ. ಶಿವಕುಮಾರ್ ಸಿಎಂ ಆಗಲಿದ್ದಾರೆ: ಶಾಸಕ ಇಕ್ಬಾಲ್ ಹುಸೇನ್ ವಿಶ್ವಾಸ

Telegram Group
Join Now

ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಮುಗಿದ ತಕ್ಷಣವೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ರಾಮನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಶುಕ್ರವಾರ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಡಿ.ಕೆ. ಶಿವಕುಮಾರ್ ಅವರ ಹೋರಾಟ ಮತ್ತು ಪಕ್ಷಕ್ಕಾಗಿ ಪಟ್ಟ ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ. ಅಧಿವೇಶನ ಮುಗಿದ ಬಳಿಕ ಆದಷ್ಟು ಬೇಗ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ. ಎಲ್ಲದಕ್ಕೂ ಹಣೆಬರಹವೇ ಮುಖ್ಯ. ಅವಕಾಶ ಸಿಗದಿದ್ದರೆ ಹಣೆಯ ಬರಹಕ್ಕೆ ಹೊಣೆ ಯಾರು? ಭಗವಂತ ಏನು ಬರೆದಿದ್ದಾರೋ ಅದು ಆಗುತ್ತದೆ” ಎಂದರು.

ಆಪ್ತರ ಭೋಜನಕೂಟ: ಬಣ ರಾಜಕೀಯವಲ್ಲ, ಸೌಹಾರ್ದ ಕೂಟ!

ಗುರುವಾರ ರಾತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆಪ್ತ ಸಚಿವರು ಮತ್ತು ಶಾಸಕರೊಂದಿಗೆ ನಡೆಸಿದ ‘ಡಿನ್ನರ್ ಮೀಟಿಂಗ್’ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಕ್ಬಾಲ್ ಹುಸೇನ್, ಇದನ್ನು ಬಣ ರಾಜಕೀಯ ಅಥವಾ ಶಕ್ತಿ ಪ್ರದರ್ಶನ ಎಂದು ಕರೆಯುವುದು ಸರಿಯಲ್ಲ. “ಪ್ರೀತಿ ವಿಶ್ವಾಸಕ್ಕಾಗಿ ಊಟಕ್ಕೆ ಸೇರುತ್ತೇವೆ. ಇದು ಸೌಹಾರ್ದಯುತ ಭೋಜನಕೂಟವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯವಿಲ್ಲ” ಎಂದು ಸ್ಪಷ್ಟಪಡಿಸಿದರು.

“ಕಾಂಗ್ರೆಸ್ ಶಿಸ್ತಿನ ಪಕ್ಷ. ಯಾವುದೇ ನಂಬರ್ ಗೇಮ್‌ಗಳಿಗೆ ಮಹತ್ವ ನೀಡುವುದಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ಅಂತಿಮ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ನಂಬರ್ ಮುಖ್ಯವಲ್ಲ, ಹೈಕಮಾಂಡ್‌ನ ನಿರ್ದೇಶನವೇ ಮುಖ್ಯ. 50-60 ಕಾಂಗ್ರೆಸ್‌ ಶಾಸಕರು ಡಿನ್ನರ್‌ಗಾಗಿ ಜೊತೆ ಸೇರಿದ್ದರು. ಶಿವಕುಮಾರ್‌ ಕರೆದರೆ 224 ಶಾಸಕರೂ ಊಟಕ್ಕೆ ಬರುತ್ತಾರೆ. ಎಲ್ಲರೂ ಡಿಕೆಶಿಗೆ ಆತ್ಮೀಯರೇ” ಎಂದರು.

ಡಿಕೆಶಿ ಪರ ಬ್ಯಾಟ್ ಬೀಸಿದ ಬಿಜೆಪಿ ಶಾಸಕ!


ಇದೇ ವೇಳೆ, ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಸದ್ಯ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಎಸ್.ಟಿ. ಸೋಮಶೇಖರ್ ಅವರು ಸಹ ಡಿ.ಕೆ. ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ”ಡಿ.ಕೆ. ಶಿವಕುಮಾರ್ ಯಾಕೆ ಸಿಎಂ ಆಗಬಾರದು? ಪಕ್ಷ ಕಟ್ಟಿಲ್ಲವೇ? ಶ್ರಮ ಪಟ್ಟಿಲ್ಲವೇ? ಅದಕ್ಕೆ ಕೂಲಿ ಕೇಳುತ್ತಿದ್ದಾರೆ. ಅಧಿವೇಶನ ಮುಗಿದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಈ ಕುರಿತು ತೀರ್ಮಾನ ತೆಗೆದುಕೊಳ್ಳುತ್ತದೆ” ಎಂದು ತಿಳಿಸಿದರು.

ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, “ಬೆಳಗಾವಿಯ ಸ್ನೇಹಿತರು ಊಟಕ್ಕೆ ಕರೆದಿದ್ದರು ಹೋಗಿದ್ದೆವು. ಕುರ್ಚಿ ಕಿತ್ತಾಟವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದರಲ್ಲಿ ಯಾವುದೇ ನಂಬರ್ ಗೇಮ್ ಇಲ್ಲ. ಊಟಕ್ಕೆ ಸೇರುವುದು ತಪ್ಪೇ,” ಎಂದು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

ಒಟ್ಟಿನಲ್ಲಿ, ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗ ಶಾಸಕರು ಸಾರ್ವಜನಿಕವಾಗಿ ಮತ್ತೆ ಸಿಎಂ ಸ್ಥಾನದ ಕುರಿತು ಹೇಳಿಕೆ ನೀಡಲು ಆರಂಭಿಸಿರುವುದು ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments