ಬೆಳಗಾವಿ: ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಗಳು ಮುಗಿಯದ ಕಥೆಯಾಗಿ ಮುಂದುವರಿದಿರುವ ಬೆನ್ನಲ್ಲೇ, ಸಚಿವ ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯನವರ ನಂತರ ಡಿಕೆ ಶಿವಕುಮಾರ್ ಸಿಎಂ ಆಗಲಿ ಅನ್ನೋ ಆಸೆ ನನಗೂ ಇದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, “ಸಿದ್ದರಾಮಯ್ಯ ಸಿಎಂ ಆಗಿ ಮುಗಿದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ತಾನೆ ಸಿಎಂ ಆಗಬೇಕು. ಅವರು ಸಿಎಂ ಆಗಲಿ ಅನ್ನೋ ಆಸೆ ನನಗೂ ಇದೆ” ಎಂದು ಹೇಳಿಕೆ ನೀಡಿದ್ದಾರೆ.
ಈ ವಿಚಾರವಾಗಿ ಅಂತಿಮ ತೀರ್ಮಾನ ಮಾಡುವಷ್ಟು ದೊಡ್ಡವರಲ್ಲ ಎಂದು ಹೇಳಿದ ಜಮೀರ್ ಅವರು, “ನಾನು ಚಿಕ್ಕವನು, ನಾನು ತೀರ್ಮಾನ ಮಾಡೋಕೆ ಆಗೋಲ್ಲ. ಹೈಕಮಾಂಡ್ ನಿರ್ಧಾರವೇ ಅಂತಿಮ. ನಮ್ಮ ಪಕ್ಷವು ಹೈಕಮಾಂಡ್ ನಿರ್ದೇಶನದಲ್ಲಿ ಕಾರ್ಯನಿರ್ವಹಿಸುತ್ತದೆ” ಎಂದು ಸ್ಪಷ್ಟಪಡಿಸಿದರು. “ನಾನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಎಲ್ಲರಿಗೂ ಹತ್ತಿರವಾಗಿದ್ದು, ಕೇವಲ ನನ್ನ ಅಭಿಪ್ರಾಯವನ್ನು ಹೇಳಬಹುದು ಅಷ್ಟೇ” ಎಂದಿದ್ದಾರೆ
ಮುಂದುವರೆದ ಆಪ್ತರ ಡಿನ್ನರ್ ಮೀಟಿಂಗ್
ಬೆಳಗಾವಿ ಚಳಿಗಾಲದ ಅಧಿವೇಶನದ ನಡುವೆ ಕಾಂಗ್ರೆಸ್‌ನ ನಾಯಕರು ಮತ್ತು ಶಾಸಕರು ಸರಣಿ ಭೋಜನ ಕೂಟಗಳಲ್ಲಿ ಭಾಗಿಯಾಗುತ್ತಿರುವುದು ರಾಜಕೀಯ ವಲಯದಲ್ಲಿ ಬಿಸಿ ಏರಿಸಿದೆ. ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಗುರುವಾರ ರಾತ್ರಿ ನಡೆದಿದ್ದ ಡಿ.ಕೆ. ಶಿವಕುಮಾರ್ ಅವರ ಆಪ್ತ ವರ್ಗದ ಡಿನ್ನರ್ ಮೀಟಿಂಗ್ನಲ್ಲಿ ಡಿಸಿಎಂ ಸಹ ಪಾಲ್ಗೊಂಡಿದ್ದರು. ಬೆಳಗಾವಿಯ ಹೊರವಲಯದಲ್ಲಿರುವ ಕೆಪಿಸಿಸಿ ಪದಾಧಿಕಾರಿಯೊಬ್ಬರ ಫಾರ್ಮ್‌ಹೌಸ್‌ನಲ್ಲಿ ನಡೆದ ಈ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ. ಎಂ.ಸಿ. ಸುಧಾಕರ್ ಮತ್ತು ಸುಮಾರು 30 ಶಾಸಕರು ಭಾಗವಹಿಸಿದ್ದರು ಎನ್ನಲಾಗಿದೆ.
ಜಮೀರ್ ಗೈರು
ಗುರುವಾರ ರಾತ್ರಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಡಿನ್ನರ್ ಮೀಟಿಂಗ್ ಮತ್ತು ಸಿಎಂ ಬದಲಾವಣೆ ಕುರಿತ ಪ್ರಶ್ನೆಗಳಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪ್ರತಿಕ್ರಿಯೆ ನೀಡಿದರು. ಈ ಔತಣ ಕೂಟಕ್ಕೆ ತಮಗೂ ಆಹ್ವಾನ ಇತ್ತು ಎಂಬುದನ್ನು ಜಮೀರ್ ಖಾನ್ ಖಚಿತಪಡಿಸಿದರು. ಆದರೆ, ಸ್ನೇಹಿತರ ಮನೆಗೆ ಹೋಗಿದ್ದ ಕಾರಣದಿಂದ ಆ ಸಭೆಗೆ ಹೋಗಲು ತಮಗೆ ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಿಎಂ ಆಪ್ತರಿಂದಲೂ ಡಿನ್ನರ್
ಈ ಸಭೆಗೂ ಮುನ್ನ ಬುಧವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದ ಸಚಿವರು ಮತ್ತು ಶಾಸಕರು ಸಹ ಬೆಳಗಾವಿಯ ಮಾಜಿ ಶಾಸಕ ಫಿರೋಜ್ ಸೇಟ್ ಅವರ ಮನೆಗೆ ಡಿನ್ನರ್‌ಗೆ ತೆರಳಿದ್ದರು.
ಒಟ್ಟಾರೆಯಾಗಿ, ಈ ಸರಣಿ ಡಿನ್ನರ್ ಮತ್ತು ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳು ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ಬಿಸಿಯೇರಲು ಕಾರಣವಾಗಿವೆ.
