ಕೊಟ್ಟಿಗೆಹಾರ: ತರುವೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಅತ್ತಿಗೆರೆ ರಘು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತರುವೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಭಿನಂದನಾ ಹಾಗೂ ಪ್ರಮಾಣವಚನ ಸ್ವೀಕಾರ ಸಮಾರಂಭ ಶಾಂತ ಹಾಗೂ ಸೌಹಾರ್ದ ವಾತಾವರಣದಲ್ಲಿ ನಡೆಯಿತು.
ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಅತ್ತಿಗೆರೆ ರಘು ಅವರು, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳಿಗೆ ನಮನ ಸಲ್ಲಿಸಿ, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಪಾರದರ್ಶಕ, ಜನಪರ ಹಾಗೂ ಸಮನ್ವಯತೆಯ ಆಡಳಿತ ನೀಡುವ ಭರವಸೆ ವ್ಯಕ್ತಪಡಿಸಿದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಾಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಸಮಾರಂಭದಲ್ಲಿ ಮಾತನಾಡಿದ ಬಣಕಲ್ ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಸುಬ್ರಹ್ಮಣ್ಯ, “ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ರಘು ಅವರು ಅವಿರೋಧವಾಗಿ ಆಯ್ಕೆಯಾಗಿರುವುದು ಗ್ರಾಮದಲ್ಲಿನ ಒಗ್ಗಟ್ಟಿನ ಪ್ರತೀಕ. ಎಲ್ಲರ ಸಹಕಾರದೊಂದಿಗೆ ಶಾಂತ ಆಡಳಿತ ನಡೆಯಲಿ” ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡ ಟಿ.ಎ. ಖಾದರ್ ಮಾತನಾಡಿ, “ಗ್ರಾಮ ಪಂಚಾಯಿತಿ ಆಡಳಿತವು ಸಮನ್ವಯತೆಯೊಂದಿಗೆ ಸಾಗಬೇಕು. ಎಲ್ಲರೊಂದಿಗೆ ಕೈಜೋಡಿಸಿ ಕೆಲಸ ಮಾಡಿದಾಗ ಮಾತ್ರ ನಿಜವಾದ ಗ್ರಾಮಾಭಿವೃದ್ಧಿ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯ ವಿನಯ್ ಗೌಡ ಮಾತನಾಡಿ, “ಅಧಿಕಾರ ಶಾಶ್ವತವಲ್ಲ, ಜನರ ವಿಶ್ವಾಸವೇ ನಿಜವಾದ ಶಕ್ತಿ. ಅದನ್ನು ಉಳಿಸಿಕೊಳ್ಳಲು ಪಾರದರ್ಶಕತೆ ಹಾಗೂ ಜವಾಬ್ದಾರಿಯುತ ಆಡಳಿತ ಅಗತ್ಯ” ಎಂದರು.
ಕಾರ್ಯಕ್ರಮಕ್ಕೆ ಸ್ವಾಗತಿಸಿ ಮಾತನಾಡಿದ ಭಿನ್ನಡಿ ಪ್ರಭಾಕರ್, “ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಗ್ರಾಮದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು” ಎಂದು ಹೇಳಿದರು.
ಪ್ರಸ್ತಾವಿಕ ನುಡಿ ನೀಡಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ಎಂ. ಸತೀಶ್ ಗೌಡ, ಹಿಂದಿನ ಆಡಳಿತದ ಅನುಭವಗಳನ್ನು ಹಂಚಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಆಡಳಿತಕ್ಕೆ ಒತ್ತು ನೀಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮರಸಣಿಗೆ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಿಶ್ವನಾಥ್, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಬಿಇಒ ಹಾಗೂ ಶಿಕ್ಷಣಾಧಿಕಾರಿ ಮೀನಾಕ್ಷಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿಂಚನ, ಉಪಾಧ್ಯಕ್ಷರಾದ ಸ್ವರೂಪ್ ಪ್ರಶಾಂತ್, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸುಶೀಲ್, ಗ್ರಾಮ ಪಂಚಾಯಿತಿ ಸದಸ್ಯೆ ಸ್ಮಿತಾ, ಕಾಂಗ್ರೆಸ್ ಮುಖಂಡ ಮನೋಜ್, ಗ್ರಾಮ ಮುಖಂಡರಾದ ತರುವೆ ವಿಜಯ್, ಜಯಪಾಲ್, ಪ್ರತಾಪ್, ಕಿರಣ್, ಅಜೀದ್, ವಿಜೇಂದ್ರ, ರಾಮಚಂದ್ರೇಗೌಡ, ಅರುಣ, ಪ್ರಶಾಂತ್, ದೀಪು, ಜಗನ್ನಾಥ್ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
