Thursday, February 12, 2026
Homeಕ್ರೈಮ್ಚಿಕ್ಕಮಗಳೂರು: ಹೊಸ ವರ್ಷಾಚರಣೆಗೆ ಕೆಲವೇ ದಿನ ಬಾಕಿ: ಪೊಲೀಸ್‌ ಇಲಾಖೆಯಿಂದ ಹೈ ಅಲರ್ಟ್‌ ಜಾರಿ

ಚಿಕ್ಕಮಗಳೂರು: ಹೊಸ ವರ್ಷಾಚರಣೆಗೆ ಕೆಲವೇ ದಿನ ಬಾಕಿ: ಪೊಲೀಸ್‌ ಇಲಾಖೆಯಿಂದ ಹೈ ಅಲರ್ಟ್‌ ಜಾರಿ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ 2026ರ ಹೊಸ ವರ್ಷಾಚರಣೆಯನ್ನು ಅತ್ಯಂತ ಶಾಂತಿಯುತವಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು ಹೋಟೆಲ್, ಹೋಂ ಸ್ಟೇ, ರೆಸಾರ್ಟ್ ಹಾಗೂ ಬಾರ್ ಮಾಲೀಕರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಪ್ರವಾಸಿಗರ ಸ್ವರ್ಗವಾಗಿರುವ ಕಾಫಿನಾಡಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಮಾಲೀಕರು ಮತ್ತು ವ್ಯವಸ್ಥಾಪಕರು ಕಡ್ಡಾಯವಾಗಿ ಈ ಸಭೆಗಳಲ್ಲಿ ಭಾಗವಹಿಸಿ ಸೂಚನೆಗಳನ್ನು ಪಾಲಿಸಬೇಕಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುವಂತೆ ಸೂಚಿಸಲಾಗಿದ್ದು, ವಿದೇಶಿಯರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡುವಂತೆ ತಿಳಿಸಲಾಗಿದೆ.

ಆಚರಣೆಯ ಸಂದರ್ಭದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸ್ವಾಗತ ಕೌಂಟರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಬರುವ ಅತಿಥಿಗಳ ಗುರುತಿನ ಚೀಟಿ ಹಾಗೂ ವಾಹನ ಪರವಾನಗಿಯಂತಹ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ ಗಣಕೀಕೃತ ದಾಖಲೆಗಳನ್ನು ನಿರ್ವಹಿಸಬೇಕು. ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಬಳಸುವ ಮುನ್ನ ಪೊಲೀಸ್ ಅನುಮತಿ ಕಡ್ಡಾಯವಾಗಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆ ಹಾಗೂ ಮಾಲಿನ್ಯಕಾರಕ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ರೇವ್ ಪಾರ್ಟಿಗಳ ಆಯೋಜನೆಗೆ ಅವಕಾಶವಿರುವುದಿಲ್ಲ ಮತ್ತು ನೈತಿಕ ಪೊಲೀಸ್ ಗಿರಿಯಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಮಾದಕ ದ್ರವ್ಯಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಅತಿಥಿಗಳಿಗೆ ಉತ್ತಮ ರಸ್ತೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಮಾಲೀಕರ ಜವಾಬ್ದಾರಿಯಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಎತ್ತರದ ಸ್ಥಳಗಳಲ್ಲಿ ಅಥವಾ ಕಟ್ಟಡದ ಮೇಲ್ಪಾವಣಿಯ ಮೇಲೆ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಮತ್ತು ಸಿಬ್ಬಂದಿಗಳು ಪ್ರವಾಸಿಗರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ತಿಳಿಸಲಾಗಿದೆ.

ಕಾರ್ಯಕ್ರಮ ಮುಗಿದ ನಂತರ ಚಾಲಕರು ಕುಡಿದು ವಾಹನ ಚಲಾಯಿಸದಂತೆ ಸತತವಾಗಿ ಜಾಗೃತಿ ಮೂಡಿಸಬೇಕು, ಇಲ್ಲವಾದಲ್ಲಿ ಅಂತಹವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಯಾವುದೇ ತುರ್ತು ಸಂದರ್ಭ ಅಥವಾ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲಾ ನಿಯಂತ್ರಣ ಕೊಠಡಿಯ ಸಂಖ್ಯೆ 9480805100ಗೆ ಕರೆ ಅಥವಾ ವಾಟ್ಸಪ್ ಮೂಲಕ ಮಾಹಿತಿ ನೀಡಿ ಶಾಂತಿಯುತ ವರ್ಷಾಚರಣೆಗೆ ಸಹಕರಿಸಲು ಕೋರಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!