ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆಸದೆ ‘ವಿಬಿ ಜಿ ರಾಮ್ ಜಿ’ (VB G RAM G) ಮಸೂದೆಯನ್ನು ಅಂಗೀಕರಿಸುವ ಮೂಲಕ ಗ್ರಾಮೀಣ ಭಾಗದ ಜೀವನಾಡಿ ಎನಿಸಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಥವಾ MGNREGA ಯೋಜನೆಯನ್ನು ಹೂತುಹಾಕಲು ಹೊರಟಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಗಂಭೀರವಾಗಿ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಮಸೂದೆಯು ಕೇವಲ ಹೆಸರಿನ ಬದಲಾವಣೆಯಲ್ಲ, ಬದಲಾಗಿ ಬಡವರ ‘ಕೆಲಸದ ಹಕ್ಕನ್ನು’ ಕಸಿದುಕೊಳ್ಳುವ ವ್ಯವಸ್ಥಿತ ಸಂಚು ಎಂದು ಕಿಡಿಕಾರಿದರು.
MGNREGA ಉದ್ಯೋಗದ ಹಕ್ಕಿನ ಮೇಲೆ ಕೊಡಲಿ ಪೆಟ್ಟು
ಕಳೆದ ಎರಡು ದಶಕಗಳಿಂದ ಗ್ರಾಮಸ್ಥರಿಗೆ ಉದ್ಯೋಗದ ಭರವಸೆ ನೀಡಿದ್ದ MGNREGA ಯೋಜನೆಯನ್ನು ಮೋದಿ ಸರ್ಕಾರವು ‘ಬೇಡಿಕೆ ಆಧಾರಿತ’ ವ್ಯವಸ್ಥೆಯಿಂದ ‘ವಿತರಣೆ ಆಧಾರಿತ’ ವ್ಯವಸ್ಥೆಗೆ ಬದಲಿಸಿದೆ. ಅಂದರೆ, ಇನ್ನು ಮುಂದೆ ಗ್ರಾಮಸ್ಥರು ಕೆಲಸ ಕೇಳಿದರೆ ಸಿಗುವುದಿಲ್ಲ; ಕೇಂದ್ರ ಸರ್ಕಾರ ಅನುಮತಿ ನೀಡಿದ ಪ್ರದೇಶಗಳಲ್ಲಿ ಮಾತ್ರ ಕೆಲಸ ದೊರೆಯಲಿದೆ. ಇದು ಸಂವಿಧಾನಬದ್ಧ ಜೀವನೋಪಾಯದ ಹಕ್ಕನ್ನು ಕಸಿದುಕೊಂಡಂತೆ ಎಂದು ಸಚಿವರು ವಿವರಿಸಿದರು.
ಹೊಸ ಮಸೂದೆಯ ಮಾರಕ ಅಂಶಗಳು:
- 60 ದಿನ ಕೆಲಸವಿಲ್ಲ: ಮಸೂದೆಯ ಸೆಕ್ಷನ್ 6(1)ರ ಪ್ರಕಾರ, ಕೃಷಿ ಚಟುವಟಿಕೆ ಹೆಚ್ಚಿರುವ ಸಮಯದಲ್ಲಿ 60 ದಿನಗಳ ಕಾಲ ಕಾರ್ಮಿಕರಿಗೆ ಕೆಲಸ ನೀಡಲಾಗುವುದಿಲ್ಲ. ಇದರಿಂದ ಕಾರ್ಮಿಕರು ಕನಿಷ್ಠ ವೇತನವಿಲ್ಲದೆ ಜಮೀನುದಾರರ ಬಳಿ ಕಡಿಮೆ ಕೂಲಿಗೆ ದುಡಿಯುವಂತಾಗುತ್ತದೆ.
- ರಾಜ್ಯಗಳ ಮೇಲೆ ಆರ್ಥಿಕ ಹೊರೆ: ಈ ಹಿಂದೆ ಶೇ.100 ರಷ್ಟು ಕೇಂದ್ರದಿಂದಲೇ ಬರುತ್ತಿದ್ದ ಅನುದಾನವನ್ನು ಈಗ 60:40 ಅನುಪಾತಕ್ಕೆ ಬದಲಿಸಲಾಗಿದೆ. ರಾಜ್ಯಗಳ ಮೇಲೆ ವಾರ್ಷಿಕ 3-4 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ.
- ಗುತ್ತಿಗೆದಾರರ ಪ್ರವೇಶ: MGNREGA ಯೋಜನೆಯಲ್ಲಿ ಇಲ್ಲದ ‘ಗುತ್ತಿಗೆದಾರ’ ಎಂಬ ಪದವನ್ನು ಸೆಕ್ಷನ್ 21(2)ರಲ್ಲಿ ತರಲಾಗಿದೆ. ಇದು ಕಾರ್ಮಿಕರ ಶೋಷಣೆಗೆ ದಾರಿ ಮಾಡಿಕೊಡುತ್ತದೆ.
- ಪಂಚಾಯತ್ ಹಕ್ಕುಗಳ ಮೊಟಕು: ಈ ಹಿಂದೆ ಗ್ರಾಮಸಭೆಗಳು ಕಾಮಗಾರಿ ನಿರ್ಧರಿಸುತ್ತಿದ್ದವು. ಈಗ ಪಿ.ಎಂ. ಗತಿಶಕ್ತಿ ಪೋರ್ಟಲ್ ಮೂಲಕ ದೆಹಲಿಯಿಂದ ಕಾಮಗಾರಿಗಳು ನಿರ್ಧಾರವಾಗಲಿವೆ.
ಸಂವಿಧಾನದ ಉಲ್ಲಂಘನೆ
“ಕೇಂದ್ರ ಸರ್ಕಾರವು ರಾಜ್ಯಗಳ ಜೊತೆ ಯಾವುದೇ ಚರ್ಚೆ ಮಾಡದೆ 60:40 ಅನುಪಾತ ಹೇರಿದೆ. ಇದು ಸಂವಿಧಾನದ ಆರ್ಟಿಕಲ್ 280 ಮತ್ತು 258ರ ನೇರ ಉಲ್ಲಂಘನೆಯಾಗಿದೆ. 16ನೇ ಹಣಕಾಸು ಆಯೋಗದ ಜೊತೆಗಾದರೂ ಈ ಬಗ್ಗೆ ಚರ್ಚಿಸಲಾಗಿದೆಯೇ?” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ತಂತ್ರಜ್ಞಾನದ ಹೆಸರಲ್ಲಿ ಶೋಷಣೆ
ಬಯೋಮೆಟ್ರಿಕ್, ಎಐ ಮತ್ತು ಜಿಯೋ ಮ್ಯಾಪಿಂಗ್ ಹೆಸರಿನಲ್ಲಿ ಜನರಿಗೆ ಉದ್ಯೋಗ ಸಿಗದಂತೆ ಮಾಡಲಾಗುತ್ತಿದೆ. ಡಿಜಿಟಲ್ ಲಿಂಕ್ ಸಮಸ್ಯೆಯಿಂದಾಗಿ ಶೇ. 38 ರಿಂದ 63 ರಷ್ಟು ಕಾರ್ಮಿಕರಿಗೆ ವೇತನವೇ ಸಂದಾಯವಾಗಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ತಾಂಡವವಾಡಲಿದ್ದು, ಮಹಿಳೆಯರ ಕೆಲಸದ ಪಾಲು ಕಡಿಮೆಯಾಗಲಿದೆ ಎಂದು ಅವರು ಎಚ್ಚರಿಸಿದರು.
“ಮೋದಿ ಸರ್ಕಾರಕ್ಕೆ ಗಾಂಧೀಜಿ ಮೇಲೆ ದ್ವೇಷವಿದ್ದರೆ ಅದು ನಮಗೆ ಗೊತ್ತು. ಆ ದ್ವೇಷಕ್ಕೆ ಯೋಜನೆಯಿಂದ ಗಾಂಧಿ ಹೆಸರು ತೆಗೆದು ಗೋಡ್ಸೆ ಹೆಸರನ್ನೇ ಇಡಿ, ಆದರೆ ಗ್ರಾಮೀಣ ಜನರ ಹೊಟ್ಟೆಯ ಮೇಲೆ ಹೊಡೆಯಬೇಡಿ,” ಎಂದು ಸಚಿವರು ಕಟುವಾಗಿ ಟೀಕಿಸಿದರು.
ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಂತೆಯೇ, ಈ ಜನವಿರೋಧಿ ವಿಬಿ ಜಿ ರಾಮ್ ಜಿ ಮಸೂದೆಯನ್ನು ಕೇಂದ್ರ ಸರ್ಕಾರವು ಹಿಂಪಡೆಯಲೇಬೇಕು. ಇಲ್ಲದಿದ್ದರೆ ಹಳ್ಳಿಯಿಂದ ದೆಹಲಿಯವರೆಗೆ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
