ಉಡುಪಿ: ಪುತ್ತಿಗೆ ಶ್ರೀಗಳ ಪರ್ಯಾಯ ಸಮಾಪನ ಹಂತ ತಲುಪಿದೆ. ತಮ್ಮ ಸಂಪೂರ್ಣ ಪರ್ಯಾಯದ ಅವಧಿಯನ್ನು ಭಗವದ್ಗೀತೆಯ ಪ್ರಚಾರಕ್ಕೆ ಬಳಸಿಕೊಂಡ ಶ್ರೀಗಳು ಇದೀಗ ಮತ್ತೊಂದು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.
ದೆಹಲಿ ಮೂಲದ ದಾನಿಯೊಬ್ಬರು ನೀಡಿರುವ 2 ಕೋಟಿ ವೆಚ್ಚದ ಚಿನ್ನದ ಭಗವದ್ಗೀತೆ ಕೃಷ್ಣದೇವರಿಗೆ ಸಮರ್ಪಣೆಯಾಗಿದೆ. ಭಗವದ್ಗೀತೆಯ 18 ಅಧ್ಯಾಯಗಳನ್ನು ಚಿನ್ನದ ಹಾಳೆಗಳಲ್ಲಿ ಬರೆಯಲಾಗಿದೆ. ದೆಹಲಿ ಮೂಲದ ನಿವೃತ್ತ ಐಎಎಸ್ ಅಧಿಕಾರಿ ಎಸ್ ಲಕ್ಷ್ಮಿ .ನಾರಾಯಣನ್ ಎಂಬವರು ಸುಮಾರು ಎರಡು ಕೋಟಿ ವೆಚ್ಚದಲ್ಲಿ ಈ ಅಪರೂಪದ ಗ್ರಂಥವನ್ನು ಕೃಷ್ಣಮಠಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕೃಷ್ಣದೇವರಿಗೆ ಸಮರ್ಪಣೆಯ ವೇಳೆ ರಥ ಬೀದಿಯಲ್ಲಿ ಚಿನ್ನದ ಭಗವದ್ಗೀತೆಯ ಮೆರವಣಿಗೆ ನಡೆಯಿತು. ಚಿನ್ನದ ಪಾರ್ಥ ಸಾರಥಿ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು.
ಚಿನ್ನದ ತಟ್ಟೆಗಳ ಮೇಲೆ ಕೆತ್ತಲಾದ ವಿಶಿಷ್ಟ ಭಗವದ್ಗೀತೆ ₹2 ಕೋಟಿ ಅಂದಾಜು ವೆಚ್ಚದಲ್ಲಿ ರಚಿಸಲಾಗಿದೆ. ಇದು ಎಲ್ಲಾ 18 ಅಧ್ಯಾಯಗಳು ಮತ್ತು 700 ಶ್ಲೋಕಗಳನ್ನು ಒಳಗೊಂಡಿದೆ.
