Saturday, February 7, 2026
Homeರಾಜಕೀಯಅಧಿಕಾರ ಹಂಚಿಕೆ ಗೊಂದಲಕ್ಕೆ ಮತ್ತೊಮ್ಮೆ ಬ್ರೇಕ್ ಹಾಕಿದ ಸಿದ್ದರಾಮಯ್ಯ: ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ

ಅಧಿಕಾರ ಹಂಚಿಕೆ ಗೊಂದಲಕ್ಕೆ ಮತ್ತೊಮ್ಮೆ ಬ್ರೇಕ್ ಹಾಕಿದ ಸಿದ್ದರಾಮಯ್ಯ: ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ

ಮೈಸೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಯಲ್ಲಿದ್ದ ಅಧಿಕಾರ ಹಂಚಿಕೆ ಹಾಗೂ ನಾಯಕತ್ವ ಬದಲಾವಣೆಯ ಕುರಿತಾದ ಊಹಾಪೋಹಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮತ್ತೊಮ್ಮೆ ತೆರೆ ಎಳೆದಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಮತ್ತು ಇದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದು ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು. 

ರಾಹುಲ್ ಗಾಂಧಿ ಜೊತೆ ಸೌಜನ್ಯದ ಭೇಟಿ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮಿಳುನಾಡಿನ ಗೂಡಲೂರಿಗೆ ತೆರಳುವ ಮಾರ್ಗಮಧ್ಯೆ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಬರಮಾಡಿಕೊಂಡ ಮುಖ್ಯಮಂತ್ರಿಗಳು, ಈ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು. ರಾಹುಲ್ ಗಾಂಧಿಯವರು ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದು, ಅವರನ್ನು ಕೇವಲ ಸ್ವಾಗತಿಸಲು ಬಂದಿದ್ದೆ ಎಂದರು.

ಅಧಿಕಾರ ಹಂಚಿಕೆ: ಹೈಕಮಾಂಡ್ ತೀರ್ಮಾನವೇ ಅಂತಿಮ

ಪಕ್ಷದ ಶಾಸಕರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಕೆಲವು ಶಾಸಕರಿಗೆ ವಾಸ್ತವದ ಅರಿವಿರುವುದಿಲ್ಲ. ನಾಯಕತ್ವದ ಬಗ್ಗೆ ತಾವಾಗಲಿ ಅಥವಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಲಿ ಮಾತನಾಡಬೇಕು ಮತ್ತು ಅಂತಿಮವಾಗಿ ಪಕ್ಷದ ವರಿಷ್ಠರ ನಿರ್ಧಾರದಂತೆ ನಾವೆಲ್ಲರೂ ನಡೆದುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಶಿಸ್ತಿನ ಸಂದೇಶ ರವಾನಿಸಿದರು.

ದಾಖಲೆಯ 17ನೇ ಬಜೆಟ್‌ಗೆ ಮುಹೂರ್ತ ನಿಗದಿ

ಆಡಳಿತಾತ್ಮಕವಾಗಿ ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿಗಳು, ಮಾರ್ಚ್ ಮೊದಲ ವಾರದಲ್ಲಿ 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುವುದಾಗಿ ತಿಳಿಸಿದರು. ಇದು ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರಿಗೆ 17ನೇ ಬಜೆಟ್ ಆಗಿರಲಿದ್ದು, ಕರ್ನಾಟಕದ ಇತಿಹಾಸದಲ್ಲಿ ಅವರು ಹೊಸ ದಾಖಲೆ ಬರೆಯಲಿದ್ದಾರೆ. ಬಜೆಟ್ ಸಿದ್ಧತೆಗಾಗಿ ಜನವರಿ 14 ರಿಂದಲೇ ಇಲಾಖಾವಾರು ಸಭೆಗಳು ಆರಂಭವಾಗಲಿವೆ ಎಂದು ತಿಳಿಸಿದರು.

ಫೆಬ್ರವರಿ 13ಕ್ಕೆ ಹಾವೇರಿಯಲ್ಲಿ ಸಾಧನಾ ಸಮಾವೇಶ

ತಾವು ಮುಖ್ಯಮಂತ್ರಿಯಾಗಿ ಎರಡನೇ ಅವಧಿಯಲ್ಲಿ 1,000 ದಿನಗಳನ್ನು ಪೂರೈಸುತ್ತಿರುವ ಸಂಭ್ರಮವನ್ನು ಜನೋತ್ಸವವನ್ನಾಗಿ ಆಚರಿಸಲು ಸರ್ಕಾರ ಮುಂದಾಗಿದೆ. ಫೆಬ್ರವರಿ 13ರಂದು ಹಾವೇರಿಯಲ್ಲಿ ಬೃಹತ್ ಸಾಧನಾ ಸಮಾವೇಶ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು. ಈ ಮೂಲಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಲಾಗುವುದು ಎಂದರು.

ಸ್ಥಳೀಯ ಚುನಾವಣೆ ಹಾಗೂ ಕುಮಾರಸ್ವಾಮಿ ವರ್ತನೆ

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದೆ ಎಂದು ಸಿದ್ಧರಾಮಯ್ಯ ಹೇಳಿದರು. ಬಿಜೆಪಿ-ಜೆಡಿಎಸ್ ಮೈತ್ರಿಯು ಈ ಚುನಾವಣೆಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಚಟುವಟಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಅವರ ಹಾವಭಾವಗಳನ್ನು ಮಾಧ್ಯಮಗಳೇ ಗಮನಿಸಲಿ ಎಂದು ಮಾರ್ಮಿಕವಾಗಿ ಉತ್ತರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!