Friday, March 27, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಇಂದು ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಮತದಾನ: ನಿಷೇಧಾಜ್ಞೆ ಜಾರಿ!

ಚಿಕ್ಕಮಗಳೂರು: ಇಂದು ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಮತದಾನ: ನಿಷೇಧಾಜ್ಞೆ ಜಾರಿ!

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ನ ಆಡಳಿತ ಮಂಡಳಿಯ 5 ನಿರ್ದೇಶಕರ ಸ್ಥಾನಗಳಿಗೆ ಶನಿವಾರ ಮತದಾನ ನಡೆಯಲಿದೆ.

ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ ಬೆಳಿಗ್ಗೆ 9 ಗಂಟೆಗೆ ಮತದಾನ ಆರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯಗೊಳ್ಳಲಿದೆ. ಬಳಿಕ ಮತ ಎಣಿಕೆ ನಡೆಯಲಿದೆ.

ಬ್ಯಾಂಕಿನ ಒಟ್ಟು 13 ಸ್ಥಾನಗಳಿಗೆ ಜ. 17 ರಂದು ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿತ್ತು. 8 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಇನ್ನುಳಿದ 5 ಸ್ಥಾನಗಳಿಗೆ ಶನಿವಾರ ಮತದಾನ ನಡೆಯಲಿದೆ. ಕಣದಲ್ಲಿ 5 ಸ್ಥಾನಗಳಿಗೆ 10 ಮಂದಿ ಸ್ಪರ್ಧೆಯಲ್ಲಿದ್ದಾರೆ. ಈ ಬಾರಿ ಚುನಾವಣೆ ಹಲವು ಕುತೂಹಲಕ್ಕೆ ಕಾರಣವಾಗಿದೆ.

ಅಂದರೆ, ಇದೇ ಮೊದಲ ಬಾರಿಗೆ ಕಡೂರು ಶಾಸಕ ಕೆ.ಎಸ್‌. ಆನಂದ್‌, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಹಾಗೂ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ವಿಧಾನಪರಿಷತ್ ಸದಸ್ಯ ಎಸ್‌.ಎಲ್‌. ಭೋಜೇಗೌಡ ಅವರು ಪುನರಾಯ್ಕೆ ಬಯಸಿ ಸ್ಪರ್ಧೆ ಮಾಡಿದ್ದಾರೆ.

ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿನ ಚುನಾವಣೆ ಕುತೂಹಲ ಮೂಡಿಸಿದೆ. ಕೆಲವೆಡೆ ನೇರ ನೇರಾ ಸ್ಪರ್ಧೆ ಇದ್ದರೆ, ಒಂದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಚಿಕ್ಕಮಗಳೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ 32 ಮಂದಿ ಮತದಾರರು ಇದ್ದು, 2 ಸ್ಥಾನಗಳಿಗೆ 3 ಮಂದಿ ಸ್ಪರ್ಧೆ ಮಾಡಿದ್ದಾರೆ. ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ, ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯ ಎಂ.ಎಸ್‌. ನಿರಂಜನ್‌ ಕಣದಲ್ಲಿದ್ದಾರೆ.

ಇಲ್ಲಿ ಅವಿರೋಧ ಆಯ್ಕೆಯಾಗುವ ನಿರೀಕ್ಷೆ ಇತ್ತು. ಆದರೆ, ನಿರಂಜನ್‌ ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದರಿಂದ ಈ ಕ್ಷೇತ್ರದ ಫಲಿತಾಂಶ ಕುತೂಹಲ ಮೂಡಿಸಿದೆ. ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂಬುದಾಗಿ ಘೋಷಣೆ ಮಾಡಿದ್ದರಿಂದ ರಾಜಕೀಯ ವಲಯದಲ್ಲಿ ಹೊಸದೊಂದು ಚರ್ಚೆ ಹುಟ್ಟು ಹಾಕಿದೆ.

ಕೊಪ್ಪ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಒಟ್ಟು 12 ಮಂದಿ ಮತದಾರರು ಇದ್ದು, ಒಂದು ಸ್ಥಾನಕ್ಕೆ 3 ಮಂದಿ ಸ್ಪರ್ಧೆ ಮಾಡಿದ್ದಾರೆ. ಕಣದಲ್ಲಿ ಪ್ರಜ್ವಲ್‌, ಕೆ.ಎಸ್‌. ರವೀಂದ್ರ, ಬಿ.ಎಸ್‌. ಸತೀಶ್‌ ಇದ್ದಾರೆ.

ಜಿಲ್ಲೆಯ ಎಲ್ಲಾ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಒಟ್ಟು 7 ಮಂದಿ ಮತದಾರರು ಇದ್ದು, ಇಲ್ಲಿನ ಒಂದು ಸ್ಥಾನಕ್ಕೆ ಕಡೂರು ಕ್ಷೇತ್ರದ ಶಾಸಕ ಕೆ.ಎಸ್‌. ಆನಂದ್‌, ಎಚ್‌.ಕೆ. ದಿನೇಶ್‌ ಹೊಸೂರು ಸ್ಪರ್ಧೆ ಮಾಡಿದ್ದಾರೆ. ಹಾಗಾಗಿ ಈ ಕ್ಷೇತ್ರದ ಫಲಿತಾಂಶ ಕುತೂಹಲ ಮೂಡಿಸಿದೆ.

ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕ್‌ ಹಾಗೂ ಇನ್ನುಳಿದ ಎಲ್ಲಾ ಸಹಕಾರ ಸಂಘಗಳ ಕ್ಷೇತ್ರದಲ್ಲಿ 94 ಮತದಾರರು ಇದ್ದು, ಈ ಕ್ಷೇತ್ರದಲ್ಲಿ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಹಾಗೂ ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಟಿ.ಎಲ್. ರಮೇಶ್‌ ಇದ್ದಾರೆ. ಹಾಗಾಗಿ ಈ ಕ್ಷೇತ್ರದ ಫಲಿತಾಂಶ ಕುತೂಹಲದಿಂದ ಜನರು ಎದುರು ನೋಡುತ್ತಿದ್ದಾರೆ.

ಹಾಗೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಆಡಳಿತ ಮಂಡಳಿ ಚುನಾವಣೆಯ ಹಿನ್ನೆಲೆಯಲ್ಲಿ, ರತ್ನಗಿರಿ ರಸ್ತೆಯಲ್ಲಿರುವ ಬ್ಯಾಂಕಿನ ನೂತನ ಆಡಳಿತ ಕಚೇರಿಯ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ. ಚುನಾವಣಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿಯನ್ನು ಕಾಪಾಡುವ ದೃಷ್ಟಿಯಿಂದ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ಬಿಎನ್‌ಎಸ್‌ಎಸ್‌ ಕಲಂ 163ರ ಅಡಿಯಲ್ಲಿ  ಜಾರಿಯಲ್ಲಿರಲಿದೆ. ಜನವರಿ 17ರ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಈ ಆದೇಶ ಅನ್ವಯವಾಗಲಿದ್ದು, ಮತದಾನ ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ. ಫುಡ್ ಪ್ಯಾಲೇಸ್‌ನಿಂದ ರಾಮೇಶ್ವರ ದೇವಾಲಯ ರಸ್ತೆಯವರೆಗೆ ಸಾರ್ವಜನಿಕ ಓಡಾಟ ಮತ್ತು ಗುಂಪು ಸೇರುವುದಕ್ಕೆ ನಿರ್ಬಂಧ ವಹಿಸಲಾಗಿದೆ. ಜಿಲ್ಲಾಡಳಿತ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!