ಬಳ್ಳಾರಿಯಲ್ಲಿ ನಡೆದ ಪೆಟ್ರೋಲ್ ಬಾಂಬ್ ದಾಳಿ ಮತ್ತು ಗುಂಡಿನ ಚಕಮಕಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಶಾಸಕ ಜಿ. ಜನಾರಧನ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದ್ದಾರೆ.
ತಾವು ಪ್ರಾಮಾಣಿಕರೆಂದು ಬಿಂಬಿಸಿಕೊಳ್ಳಲು ಹಿಂದೆ 7 ಪ್ರಕರಣಗಳನ್ನು ಸಿಬಿಐಗೆ ನೀಡಿದ್ದ ಮುಖ್ಯಮಂತ್ರಿಗಳು, ಈಗ ಬಳ್ಳಾರಿ ಪ್ರಕರಣದ ವಿಷಯದಲ್ಲಿ ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳನ್ನು ನೀಡಲಾಗಿದೆ ಎಂಬುದು ಮುಖ್ಯವಲ್ಲ, ಪ್ರಸಕ್ತ ಘಟನೆಯಲ್ಲಿ ಕಾಂಗ್ರೆಸ್ ಶಾಸಕ ನಾ.ರಾ. ಭರತ್ ರೆಡ್ಡಿ ಅವರ ಪಾತ್ರವಿರುವುದು ಸಾಬೀತಾಗಿರುವುದರಿಂದ ಸರ್ಕಾರ ಮುಜುಗರ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ.
ಈ ಘಟನೆಯು ಕೇವಲ ಗಲಾಟೆಯಲ್ಲ, ಸಾವಿರಾರು ಜನರೊಂದಿಗೆ ಬಂದು ಪೆಟ್ರೋಲ್ ಬಾಂಬ್ ಎಸೆದು ಗನ್ ಫೈರಿಂಗ್ ಮಾಡುವ ಮೂಲಕ ನಡೆಸಿದ ತನ್ನ ಮೇಲಿನ ಕೊಲೆ ಯತ್ನವಾಗಿದೆ ಎಂದು ರೆಡ್ಡಿ ವಿವರಿಸಿದ್ದಾರೆ. ಕೇವಲ ಮೂವರು ಖಾಸಗಿ ಗನ್‍ಮೆನ್‍ಗಳನ್ನು ಬಂಧಿಸಿ ಪ್ರಕರಣವನ್ನು ಸಿಐಡಿಗೆ ನೀಡುವ ಮೂಲಕ ಶಾಸಕರನ್ನು ರಕ್ಷಿಸಲು ಸರ್ಕಾರ ಹವಣಿಸುತ್ತಿದೆ ಎಂದು ಅವರು ದೂರಿದ್ದಾರೆ. ಬಳ್ಳಾರಿ ಪ್ರಕರಣದ ಸಿಬಿಐ ತನಿಖೆಗೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಈಗಾಗಲೇ ನಿರ್ಣಯ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ವಾಲ್ಮೀಕಿ ನಿಗಮದ ಹಗರಣ ಮತ್ತು ಬಳ್ಳಾರಿ ಘಟನೆಗಳನ್ನು ಖಂಡಿಸಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ. ವಾಲ್ಮೀಕಿ ಹೆಸರಿನಲ್ಲಿ ಸರ್ಕಾರ ಅಮಾಯಕರ ಪ್ರಾಣ ತೆಗೆಯುತ್ತಿದೆ ಎಂದು ಕಿಡಿಕಾರಿದ ಅವರು, ಶ್ರೀರಾಮುಲು ಅವರು ಆ ಜನಾಂಗದ ನಾಯಕನಾಗಿ ಈ ಹೋರಾಟ ರೂಪಿಸಲು ಬಯಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
