ಚಿಕ್ಕಮಗಳೂರು: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಚಿಕ್ಕಮಗಳೂರು ಮೂಲದ ವ್ಯಕ್ತಿ ದೂರು ನೀಡಿದ್ದಾರೆ.
ಚಿಕ್ಕಮಗಳೂರಿನ ದೀಪಕ್ ಮಯೂರ್ ಪಟೇಲ್ ಎಂಬುವವರು ದೂರು ನೀಡಿದ್ದು, ಚಿತ್ರೀಕರಣದ ನೆಪದಲ್ಲಿ ತಮಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸುದೀಪ್ ಅವರ ಸಹ ನಿರ್ಮಾಪಕರಾದ ಮಹೇಶ್ ಮತ್ತು ಗಡ್ಡ ವಿಜಿ ಅವರು ಈ ಹಿಂದೆ ಚಿತ್ರೀಕರಣಕ್ಕಾಗಿ ಬಂದಿದ್ದರು ಎಂದು ದೀಪಕ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು 2026 ರಿಂದಲೂ ಅವರು ಹಲವು ಬಾರಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೆಂಗಳೂರು ಕಮಿಷನರ್ ಅವರಿಗೆ ದೂರು ನೀಡುತ್ತಾ ಬಂದಿದ್ದು, ಈ ಪ್ರಕರಣವು ಈ ಹಿಂದೆ ನ್ಯಾಯಾಲಯದ ಮೆಟ್ಟಿಲು ಸಹ ಏರಿತ್ತು.
‘ವಾರಸ್ಥಾರ’ ಧಾರಾವಾಹಿ ಚಿತ್ರೀಕರಣಕ್ಕಾಗಿ ಎರಡು ವರ್ಷಗಳ ಕಾಲ ಅನುಮತಿ ಕೋರಿ ಬಂದಿದ್ದ ತಂಡವು, ಸುಮಾರು ನಾಲ್ಕು ತಿಂಗಳುಗಳ ಕಾಲ ಮಾತ್ರ ಚಿತ್ರೀಕರಣ ನಡೆಸಿತ್ತು. ಈ ಸಂದರ್ಭದಲ್ಲಿ ಕಲಾವಿದರ ವಾಸ್ತವ್ಯಕ್ಕಾಗಿ ತೋಟದಲ್ಲಿದ್ದ ಕಾಫಿ ಗಿಡಗಳು, ಸಿಲ್ವರ್ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಶೆಡ್ ನಿರ್ಮಾಣ ಮಾಡಲಾಗಿತ್ತು. ಇದರಿಂದ ತಮ್ಮ ತೋಟಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ದೀಪಕ್ ಆರೋಪಿಸಿದ್ದಾರೆ.
ಆದರೆ, ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಚಿತ್ರೀಕರಣ ತಂಡವು ಇದ್ದಕ್ಕಿದ್ದಂತೆ ಬೆಂಗಳೂರಿಗೆ ವಾಪಸ್ ತೆರಳಿದ್ದು, ಸುಮಾರು 80 ಸಾವಿರ ರೂ. ಹಣವನ್ನು ಬಾಕಿ ಉಳಿಸಿಕೊಂಡಿದೆ. ಅಷ್ಟೇ ಅಲ್ಲದೆ, ಹಾನಿಗೊಳಗಾದ ತೋಟದ ಜಾಗವನ್ನು ಸರಿಪಡಿಸದೆ ಹಾಗೆಯೇ ಬಿಟ್ಟು ಹೋಗಲಾಗಿದೆ. ತಮಗಾದ ನಷ್ಟಕ್ಕೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ದೀಪಕ್ ಅವರು ಇದೇ ಜ.16 ರಂದು ಬೆಂಗಳೂರು ಕಮಿಷನರ್ ಕಚೇರಿಗೆ ಮತ್ತೊಮ್ಮೆ ದೂರು ಸಲ್ಲಿಸಿದ್ದಾರೆ.
