ಹಾಸನ: ಜಿಲ್ಲೆಯ ಭವಿಷ್ಯವನ್ನು ಸುಧಾರಿಸುವ ದೃಷ್ಟಿಯಿಂದ ನಶಾ ಮುಕ್ತಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ ಮೇಲೆ ವಿಶೇಷ ಹೊತ್ತು ನೀಡುವುದು, ರಸ್ತೆ ಅಪಘಾತ ತಡೆಗೆ ಕ್ರಮ, ಕ್ರೈ ನಿಯಂತ್ರಣ ಹಾಗೂ ಬಾಂಗ್ಲ ದೇಶ ವಲಸಿಗರ ಕುರಿತು ಕ್ರಮವಹಿಸಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಗುರುವಾರದಂದು ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪತ್ರಕರ್ತರ ನಡುವಿನ ಪರಿಚಯದಲ್ಲಿ ಅಭಿನಂಧನೆ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳು ಸಮಾಜದ ಎರಡು ಪ್ರಮುಖ ಕಂಬಗಳಾಗಿದ್ದು, ಎರಡೂ ವೃತ್ತಿಗಳ ನಡುವೆ ನಂಬಿಕೆ ಮತ್ತು ಸಹಕಾರ ಇರಬೇಕಾದ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದರು. ಮಾಧ್ಯಮದ ಪಾತ್ರ ಉತ್ತಮ ಸಮಾಜ ನಿರ್ಮಾಣದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಸತ್ಯಕ್ಕಿಂತ ಸುಳ್ಳು ಸುದ್ದಿಗಳು ವೇಗವಾಗಿ ವೈರಲ್ ಆಗುತ್ತಿರುವ ಈ ವೇಳೆ ನಿಖರ, ಸಮತೋಲನದ ಹಾಗೂ ಹೊಣೆಗಾರಿಕೆಯಿಂದ ಕೂಡಿದ ವರದಿ ನೀಡುವ ಜವಾಬ್ದಾರಿ ಮಾಧ್ಯಮದ ಮೇಲಿದೆ ಎಂದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥತೆ, ಭದ್ರತೆ ಹಾಗೂ ಜಾಗೃತಿ ಮೂಡಿಸುವಲ್ಲಿ ಮಾಧ್ಯಮದ ಸಹಕಾರ ಪೊಲೀಸ್ ಇಲಾಖೆಗೆ ಅಗತ್ಯವಾಗಿದೆ ಎಂದು ಹೇಳಿದರು. ಈ ಹಿಂದೆ ನಾವು ಉತ್ತರ ಪ್ರದೇಶದಲ್ಲಿ ೨೦೧೮ರಲ್ಲಿ ತಮ್ಮ ಮೊದಲ ಪೋಸ್ಟಿಂಗ್ ಪಡೆದಿದ್ದು, ಇದಾದ ನಂತರದಲ್ಲಿ ವಿವಾಹ ನಡೆದು ಹಾಸನ ಜಿಲ್ಲೆಗೆ ಎರಡನೇ ಪೋಸ್ಟಿಂಗ್ ಆಗಿ ಆಗಮಿಸಿದ್ದೇನೆ. ಡಿಸೆಂಬರ್ ತಿಂಗಳ ಕೊನೆ ದಿನ ಬಂದು ನಾಲ್ಕು ವಾರಗಳಾಗಿದ್ದು, ಪೊಲೀಸ್ ಇಲಾಖೆ, ಸಾರ್ವಜನಿಕರು ಹಾಗೂ ಮಾಧ್ಯಮದ ಉತ್ತಮ ಸಹಕಾರ ನಮಗೆ ಲಭಿಸಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಡ್ರಗ್ಸ್ ಬಳಕೆಯಿಂದ ಹೊರಬರಲು ಇಚ್ಛಿಸುವವರಿಗಾಗಿ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ನಶಾ ವಿರುದ್ಧದ ಹೋರಾಟ ಕೇವಲ ಕಾನೂನು ಕ್ರಮಕ್ಕೆ ಸೀಮಿತವಾಗದೇ, ಸಾಮಾಜಿಕ ಜವಾಬ್ದಾರಿಯೂ ಆಗಿದೆ ಎಂದರು. ನಶಾ ಸಮಸ್ಯೆ ನಿರ್ಮೂಲನೆಗೆ ಮೊದಲು ಡ್ರಗ್ಸ್ ಪೂರೈಕೆದಾರರನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಿದ್ದು, ನಂತರ ಬಳಕೆದಾರರ ಮೇಲೂ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ತಮ್ಮ ಎರಡನೇ ಪ್ರಮುಖ ಆದ್ಯತೆಯಾಗಿದ್ದು, ದೂರು ಸಲ್ಲಿಸಲು ಮಹಿಳೆಯರಿಗೆ ಸುಲಭ ಮತ್ತು ಭಯರಹಿತ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ‘ಶೀ ಬಾಕ್ಸ್’ ಅಳವಡಿಸಲಾಗುತ್ತಿದ್ದು, ಅದರ ಕೀ ಪೊಲೀಸ್ ಇಲಾಖೆಯ ಬಳಿ ಇರಲಿದೆ ಎಂದು ತಿಳಿಸಿದರು.
ಮಹಿಳೆಯರ ಸುರಕ್ಷತೆ ಹೆಚ್ಚಿಸಲು ‘ಅಕ್ಕ ಪಡೆ’ ಮೂಲಕ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಗುತ್ತಿದ್ದು, ಆತ್ಮರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ಕೆಲಸಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಹಿನ್ನೆಲೆಯಲ್ಲಿ, ಅಪಘಾತ ಸಂಭವಿಸುತ್ತಿರುವ ಸ್ಥಳಗಳಲ್ಲಿ ನಿಖರ ಕಾರಣಗಳನ್ನು ಗುರುತಿಸಲಾಗುತ್ತಿದೆ. ಬ್ಲಾಕ್ ಸ್ಪಾಟ್‌ಗಳಲ್ಲಿ ಅಗತ್ಯ ತಾಂತ್ರಿಕ ಹಾಗೂ ಮೂಲಸೌಕರ್ಯ ಸುಧಾರಣೆಗಾಗಿ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಹಾಸನ ನಗರದಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರವಾಗಿದ್ದು, ನಿಗದಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದೇ ಪ್ರಮುಖ ಸಮಸ್ಯೆಯಾಗಿದೆ. ಈ ಕುರಿತು ಶಾಶ್ವತ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಯಾರಾರನ್ನೋ ಬಾಂಗ್ಲಾದೇಶಿ ನುಸುಳುಕೋರರು ಎಂದು ತೋರಿಸಿ ಪೋಸ್ಟ್ ಮಾಡಲಾಗುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಆರೋಪಗಳಿಗೆ ಸ್ಪಷ್ಟ ಮತ್ತು ನಿಖರ ಮಾಹಿತಿ ಅಗತ್ಯವಿದ್ದು, ಯಾವುದೇ ದೃಢೀಕರಣವಿಲ್ಲದೆ ಮಾಹಿತಿ ಹಂಚಿಕೊಳ್ಳುವುದರಿಂದ ಸಮಾಜದಲ್ಲಿ ಗೊಂದಲ ಉಂಟಾಗುತ್ತದೆ ಎಂದು ಎಚ್ಚರಿಸಿದರು. ಅಪರಾಧ ನಿಯಂತ್ರಣದಲ್ಲಿ ಜನರು ಮತ್ತು ಪೊಲೀಸ್ ಇಲಾಖೆ ಕೈಜೋಡಿಸಬೇಕಿದ್ದು, ನಿಖರ ಮಾಹಿತಿ ದೊರೆತಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ವೇಳೆ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆಂಚೇಗೌಡ, ಉಪಾಧ್ಯಕ್ಷರಾದ ನಂಜುಂಡೇಗೌಡ, ಮೋಹನ್ ಕುಮಾರ್, ಕಾರ್ಯದರ್ಶಿ ಕೆ.ಜಿ. ಸುರೇಶ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆಪಿಎಸ್ ಪ್ರಮೋದ್ ಇತರರು ಉಪಸ್ಥಿತರಿದ್ದರು.
