ಚಿಕ್ಕಮಗಳೂರು : ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 399 ಕಿರಿಯ ತರಬೇತಿ ಅಧಿಕಾರಿಗಳು (JTOs) ಇಂದು ತೀವ್ರ ಆಡಳಿತಾತ್ಮಕ ಅನ್ಯಾಯ ಮತ್ತು ಭೇದಭಾವಕ್ಕೆ ಒಳಗಾಗಿದ್ದು, ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಹೌದು, ಮಾನ್ಯ ಸುಪ್ರೀಂ ಕೋರ್ಟ್ ತನ್ನ ಸ್ಪಷ್ಟ ಆದೇಶದಲ್ಲಿ, ಈಗಾಗಲೇ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವ ಯಾವುದೇ ಉದ್ಯೋಗಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ನಿಖರವಾಗಿ ತಿಳಿಸಿದೆ. ಈ ಆದೇಶದ ಮೂಲ ಉದ್ದೇಶವೂ ಉದ್ಯೋಗ ಭದ್ರತೆ ಹಾಗೂ ಸೇವೆಯ ನಿರಂತರತೆಯನ್ನು ಕಾಪಾಡುವುದಾಗಿದ್ದು, ಆದರೆ ಪ್ರಸ್ತುತ ನಡೆಯುತ್ತಿರುವ ಅಕ್ರಮ ಕ್ರಮಗಳು ಅತ್ಯಂತ ಆತಂಕಕಾರಿ ಆಗಿವೆ.
ನಮ್ಮ ಹೆಸರುಗಳು ಮೂಲ ಅಂತಿಮ ಪಟ್ಟಿಯಲ್ಲೂ ಹಾಗೂ ಪುನರ್‌ಸಂಶೋಧಿತ ಅಂತಿಮ ಪಟ್ಟಿಯಲ್ಲೂ ಸ್ಪಷ್ಟವಾಗಿ ಇದ್ದರೂ, ನಮ್ಮ ಮೇಲೆ ಮಾತ್ರ ಅನ್ಯಾಯ ನಡೆಯುತ್ತಿರುವುದಾಗಿ ಕಿರಿಯ ಅಧಿಕಾರಿಯೊಬ್ಬರು ನೋವನ್ನು ತೋಡಿಕೊಂಡಿದ್ದಾರೆ.
ಕಮಿಷನರ್ ಅವರು ಕಳೆದ ನಾಲ್ಕು ತಿಂಗಳಿಂದ ನಮ್ಮ ಸಂಬಳ ಶ್ರೇಣಿಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ, ಇದು ಸಂಪೂರ್ಣವಾಗಿ ಅನ್ಯಾಯ ಹಾಗೂ ಕಾನೂನುಬಾಹಿರ ಕ್ರಮವಾಗಿದೆ.
ಪಬ್ಲಿಕ್ ಇಂಪ್ಯಾಕ್ಟ್‌ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, HRMS ಸ್ಪಷ್ಟನೆ ಇದ್ದರೂ ಕಾನೂನು ಉಲ್ಲಂಘನೆ ಮಾಡುತ್ತಿದ್ದು, HRMS ವಿಭಾಗದ ಪ್ರಕಾರ ಸರ್ಕಾರದ ಲಿಖಿತ ಅನುಮತಿ, ಅಥವಾ ನ್ಯಾಯಾಲಯದ ಆದೇಶ, ಅಥವಾ DPR (Departmental Proceedings Report) ಇವುಗಳಲ್ಲಿ ಯಾವುದಾದರೂ ಇದ್ದರೆ ಮಾತ್ರ ಸಂಬಳ ಶ್ರೇಣಿ ಬದಲಾವಣೆ ಸಾಧ್ಯ ಎಂದು ತಿಳಿಸಿದೆ. ಆದರೆ ಈ ಎಲ್ಲವೂ ಇಲ್ಲದಿದ್ದರೂ ಸಹ, ಕಮಿಷನರ್ ಅವರು ಏಕಪಕ್ಷೀಯವಾಗಿ ನಮ್ಮ ಮೇಲೆ ಸಂಬಳ ಕಡಿತ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರ್ಕಾರಿ ನಿಯಮಗಳಿಗೂ ಹಾಗೂ ಸುಪ್ರೀಂ ಕೋರ್ಟ್ ಆದೇಶಕ್ಕೂ ವಿರುದ್ಧವಾಗಿದೆ ಎಂದರು.
ಹೊಸ ಪುನರ್‌ಸಂಶೋಧಿತ ಪಟ್ಟಿಯಿಂದ ಸೇರಿದವರಿಗೆ ಸಂಬಳ ನೀಡುತ್ತಿದ್ದರೂ ನಮಗೆ ಮಾತ್ರ ನಿರಾಕರಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದು ನೌಕರರ ಪ್ರಶ್ನೆಯಾಗಿದೆ.
ಹೊಸ Revised List ಮೂಲಕ ಇತ್ತೀಚೆಗೆ ಸೇರಿದ ಅಭ್ಯರ್ಥಿಗಳಿಗೆ ಸಂಪೂರ್ಣ ಸಂಬಳ ನೀಡಲಾಗುತ್ತಿದೆ, ಆದರೆ ನಾವು ಮೊದಲಿನಿಂದಲೇ ಮೆರಿಟ್ ಆಧಾರಿತವಾಗಿ ಆಯ್ಕೆಯಾದ ಅಭ್ಯರ್ಥಿಗಳಾಗಿದ್ದರೂ, ನಮಗೆ ಸಂಬಳ ನೀಡಲಾಗುತ್ತಿಲ್ಲ. ಇದು ಸ್ಪಷ್ಟವಾದ ಭೇದಭಾವ, ಮೆರಿಟ್ ಅವಮಾನ ಮತ್ತು ಆಡಳಿತಾತ್ಮಕ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳಿಗೆ ಸಂಬಳ ಇಲ್ಲದೆ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಮನೆ ಖರ್ಚು, ದೈನಂದಿನ ಜೀವನ, ಎಲ್ಲವೂ ಸಂಕಷ್ಟಕರ ಸ್ಥಿತಿಗೆ ತಲುಪಿದೆ. ನ್ಯಾಯಾಲಯದ ಆದೇಶವನ್ನು ಗೌರವಿಸದೇ ನಡೆಯುತ್ತಿರುವ ಇಂತಹ ಕ್ರಮಗಳು ಸಾರ್ವಜನಿಕ ಸೇವಾ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎಬ್ಬಿಸುತ್ತಿವೆ ಎಂಬುದಾಗಿ ಅಳಲನ್ನು ತೋಡಿಕೊಂಡರು.
ಮಾಧ್ಯಮದ ಮುಖೇನ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಕೆಳಗಿನ ನ್ಯಾಯಸಮ್ಮತ ಬೇಡಿಕೆಗಳನ್ನು ಮುಂದಿಡುತ್ತಿದ್ದು: ಸುಪ್ರೀಂ ಕೋರ್ಟ್ ಆದೇಶದ ಆತ್ಮಕ್ಕೆ ಅನುಗುಣವಾಗಿ ನಮ್ಮ ಸೇವೆಯನ್ನು ಯಾವುದೇ ವ್ಯತ್ಯಯವಿಲ್ಲದೆ ಮುಂದುವರಿಸಬೇಕು, ತಕ್ಷಣವೇ ಬಾಕಿ ಉಳಿದಿರುವ ಸಂಪೂರ್ಣ ಸಂಬಳವನ್ನು ಬಿಡುಗಡೆ ಮಾಡಬೇಕು, ಹಳೆಯ ಸಂಬಳ ಶ್ರೇಣಿ ಮತ್ತು ಎಲ್ಲಾ ಭತ್ಯೆಗಳನ್ನು ಸಂಪೂರ್ಣವಾಗಿ ರಕ್ಷಿಸಬೇಕು, ಮೆರಿಟ್ ಆಧಾರಿತವಾಗಿ ಆಯ್ಕೆಯಾದ ಅಭ್ಯರ್ಥಿಗಳ ಮೇಲೆ ನಡೆಯುತ್ತಿರುವ ಭೇದಭಾವವನ್ನು ತಕ್ಷಣ ನಿಲ್ಲಿಸಬೇಕು.
ನಮ್ಮ ಬೇಡಿಕೆಗಳು ಯಾವುದೇ ವಿಶೇಷ ಅನುಕೂಲಗಳ ಬೇಡಿಕೆಗಳಲ್ಲದೆ, ಬದಲಾಗಿ ನ್ಯಾಯಾಲಯದ ಆದೇಶ, ಸರ್ಕಾರಿ ನಿಯಮಗಳು ಮತ್ತು ಸಂವಿಧಾನಾತ್ಮಕ ಹಕ್ಕುಗಳ ಅನುಷ್ಠಾನಕ್ಕೆ ಸಂಬಂಧಿಸಿದ ನ್ಯಾಯಸಮ್ಮತ ಬೇಡಿಕೆಗಳು ಆಗಿರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರ ಗಮನಹರಿಸಿ, 399 ಕಿರಿಯ ತರಬೇತಿ ಅಧಿಕಾರಿಗಳು ಮತ್ತು ಅವರ ಕುಟುಂಬಗಳಿಗೆ ನ್ಯಾಯ ದೊರಕುವಂತೆ ನೆರವಾಗಬೇಕು ಎಂಬುದು ಅಧಿಕಾರಿಗಳ ಅಗ್ರಹವಾಗಿದೆ.
