ಚಿಕ್ಕಮಗಳೂರು: ಕಡೂರು ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ಪಿಎ ಕಿರುಕುಳಕ್ಕೆ ಬೇಸತ್ತು ಸರ್ಕಾರಿ ನೌಕರರೊಬ್ಬರು ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದು ಕೊನೆಗೂ ಚಿಕ್ಕಮಗಳೂರು ನಗರದ ವಿಜಯಪುರ ಮನೆಯಲ್ಲಿ ಪತ್ತೆಯಾಗಿದ್ದಾರೆ.

ಹೌದು .. ಕಡೂರು ತಾಲೂಕು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಇಕ್ಬಾಲ್ ಕೆಲ ದಿನಗಳ ಹಿಂದೆ ದಿಢೀರ್ ನಾಪತ್ತೆಯಾಗಿದ್ದರು. ನಾಪತ್ತೆಯಾಗುವ ಮೊದಲು ಅವರು ಬರೆದಿದ್ದ ಪತ್ರದಲ್ಲಿ, ಕಡೂರು ಕಾಂಗ್ರೆಸ್ ಶಾಸಕ ಕೆ.ಎಸ್. ಆನಂದ್ ಅವರ ಆಪ್ತ ಸಹಾಯಕ ಮಂಜುನಾಥ್ ಸೇರಿದಂತೆ ನಾಲ್ವರು ಅಧಿಕಾರಿಗಳು ತಮಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇಕ್ಬಾಲ್ ಅವರ ಪತ್ರದಲ್ಲಿ ಶಾಸಕರ ಪಿಎ ಮಂಜುನಾಥ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಕುಮಾರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಕಲ್ಲೇಶ್ ಹಾಗೂ ಕಡೂರು ತಹಶೀಲ್ದಾರ್ ಪೂರ್ಣಿಮಾ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಈ ನಾಲ್ವರು ಕೆಲಸ ಮಾಡಲು ಬಿಡದೇ ಒತ್ತಡ ಹೇರುತ್ತಿದ್ದು, ಪ್ರತೀ ತಿಂಗಳು 25,000 ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಮಾಡಿದ್ದ ಇಕ್ಬಾಲ್
ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪೋಲಿಸರು ತನಿಖೆ ಆರಂಭಿಸಿದರು. ಮೊಬೈಲ್ ಲೋಕೆಶನ್ ಮತ್ತು ಮಾಹಿತಿಯ ಆಧಾರದ ಮೇಲೆ ಹುಡುಕಾಟ ನಡೆಸಿದ್ದರು. ಈ ವೇಳೆ ಇಕ್ಬಾಲ್ ಅವರು ಚಿಕ್ಕಮಗಳೂರಿನ ವಿಜಯಪುರದಲ್ಲಿರುವ ತಮ್ಮ ಮನೆಯಲ್ಲಿ ಇರುವುದು ಪತ್ತೆಯಾಗಿದೆ
