Thursday, March 5, 2026
Homeಕ್ರೈಮ್ಚಿಕ್ಕಮಗಳೂರು: ಸಂಪರ್ಕಕ್ಕೇ ಸಿಗುತ್ತಿಲ್ಲ ಇರಾನ್‌ನಲ್ಲಿ ಕೆಲಸಕ್ಕೆ ಹೋದ ಕೊಪ್ಪದ ಯುವಕ: ಕಂಗಲಾದ ಪೋಷಕರು

ಚಿಕ್ಕಮಗಳೂರು: ಸಂಪರ್ಕಕ್ಕೇ ಸಿಗುತ್ತಿಲ್ಲ ಇರಾನ್‌ನಲ್ಲಿ ಕೆಲಸಕ್ಕೆ ಹೋದ ಕೊಪ್ಪದ ಯುವಕ: ಕಂಗಲಾದ ಪೋಷಕರು

ಚಿಕ್ಕಮಗಳೂರು: ಇರಾನ್ ಯುದ್ಧದ ಕೆನ್ನಾಲಗೆಗೆ ಸಿಲುಕಿರುವ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಯುವಕ ಸಂಪರ್ಕಕ್ಕೆ ಸಿಗದ ಕಾರಣ ಕುಟುಂಬಸ್ಥರು ಆತಂಕಕ್ಕೀಡಾಗಿರುವ ಘಟನೆ ಕೊಪ್ಪ ತಾಲೂಕಿನ ಹಿರೇಕೂಡಿಗೆ ಗ್ರಾಮದಲ್ಲಿ ನಡೆದಿದೆ.

ಸಂಪರ್ಕಕ್ಕೆ ಸಿಗದ ಮಗನ ಪತ್ತೆಗೆ ಪೋಷಕರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕದ ಬಡಿದಿದ್ದಾರೆ. ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮದ ನಿಶ್ಚಿತ್ ಎಂಬ ಯುವಕ ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಯುದ್ಧದ ಸುಳಿಯಲ್ಲಿ ಸಿಲುಕಿರುವ ಆತಂಕಕಾರಿ ವರದಿ ಲಭ್ಯವಾಗಿದೆ.

ಮರ್ಚಂಟ್ ನೇವಿಯಲ್ಲಿ ವೃತ್ತಿ ಆರಂಭಿಸಿದ್ದ ನಿಶ್ಚಿತ್, ಕೇವಲ ಐದು ತಿಂಗಳ ಹಿಂದಷ್ಟೇ ಉದ್ಯೋಗ ನಿಮಿತ್ತ ಇರಾನ್‌ಗೆ ಪ್ರಯಾಣ ಬೆಳೆಸಿದ್ದರು. ಆದರೆ, ಪ್ರಸ್ತುತ ಅಮೆರಿಕ ಬೆಂಬಲಿತ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ತಾರಕಕ್ಕೇರಿದ್ದು, ಕ್ಷಿಪಣಿ ದಾಳಿಗಳ ಅಬ್ಬರದ ನಡುವೆ ನಿಶ್ಚಿತ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಬೆಳವಣಿಗೆಯಿಂದಾಗಿ ಅವರ ಪೋಷಕರು ಮತ್ತು ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದು, ದಿನನಿತ್ಯ ಮಗನ ಕರೆಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಕಳೆದ ಕೆಲವು ದಿನಗಳಿಂದ ನಿಶ್ಚಿತ್ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಯುದ್ಧ ಪೀಡಿತ ಪ್ರದೇಶದಲ್ಲಿ ಅವರ ಸ್ಥಿತಿ ಏನಾಗಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಮಗನ ಸುರಕ್ಷತೆಯ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಹಿರೇಕೊಡಿಗೆ ಗ್ರಾಮದಲ್ಲಿ ಶೋಕದ ಮೌನ ಆವರಿಸಿದೆ. ಪ್ರಸ್ತುತ ಈ ವಿಷಯದ ಕುರಿತು ಜಿಲ್ಲಾಡಳಿತವಾಗಲಿ ಅಥವಾ ಸ್ಥಳೀಯ ಪೊಲೀಸ್ ಇಲಾಖೆಯಾಗಲಿ ಯಾವುದೇ ಅಧಿಕೃತ ಮಾಹಿತಿ ಪಡೆಯದಿರುವುದು ಪೋಷಕರ ಆತಂಕವನ್ನು ಇಮ್ಮಡಿಗೊಳಿಸಿದೆ. ಹೀಗಾಗಿ, ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ವಿದೇಶಾಂಗ ಇಲಾಖೆಯ ಮೂಲಕ ನಿಶ್ಚಿತ್ ಅವರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕು ಎಂದು ಕುಟುಂಬದವರು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!