ಚಿಕ್ಕಮಗಳೂರು: ಮನೆಯೊಂದರಲ್ಲಿ ನಡೆಸುತ್ತಿದ್ದ ಕ್ಯಾಂಟೀನ್‌ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.
ಟೌನ್ ಪೊಲೀಸ್ ಠಾಣೆಯ ಸಮೀಪದಲ್ಲೇ ಇರುವ ಸುರೇಶ್ ಮತ್ತು ಅವರ ಪತ್ನಿ ವೆಳ್ಳಿ ಎಂಬುವವರು ಈ ಕ್ಯಾಂಟೀನ್ ನಡೆಸುತ್ತಿದ್ದು, ಬೆಂಕಿಯ ಕೆನ್ನಾಲಿಗೆಗೆ ಕ್ಯಾಂಟೀನ್‌ನಲ್ಲಿದ್ದ ಪೀಠೋಪಕರಣಗಳು, ದಿನಸಿ ಸಾಮಗ್ರಿಗಳು ಸೇರಿದಂತೆ ಹಲವು ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ದುರದೃಷ್ಟವಶಾತ್, ಬೆಂಕಿ ಆವರಿಸಿದ ಸಂದರ್ಭದಲ್ಲಿ ಅದನ್ನು ನಂದಿಸಲು ಹೋದ ಸುರೇಶ್ ಅವರ ಪತ್ನಿ ವೆಳ್ಳಿಯವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಏಕಾಏಕಿ ಸಂಭವಿಸಿದ ಈ ಅಗ್ನಿ ಅವಘಡದಿಂದ ಮಾಲೀಕ ಸುರೇಶ್ ಅವರ ಕುಟುಂಬಕ್ಕೆ ಬೃಹತ್ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

