ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮತ್ತೆ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು ತಾಲೂಕು, ಮಲ್ಲಂದೂರು, ಮೂಡಿಗೆರೆ, ಗೋಣಿಬೀಡು, ಜನ್ನಪೂರ, ಕೊಟ್ಟಿಗೆಹಾರ, ಜಾವಳಿ, ಕಳಸ, ಕಡಬಗೆರೆ, ಹುಯಿಗೆರೆ, ಅಂಡವಾನೆ, ಮಾಗಲು, ಕಣತಿ, ಖಾಂಡ್ಯ, ಸೇರಿದಂತೆ ಸುತ್ತಮುತ್ತಲು ಧಾರಾಕಾರ ಮಳೆ ಜತೆಗೆ ಭರ್ಜರಿ ಆಲಿಕಲ್ಲೂ ಸುರಿಯುತ್ತಿದೆ.

ಆಲಿಕಲ್ಲು ಮಳೆ ಬೀಳುತ್ತಿರುವುದನ್ನು ನೋಡಿ ಕಾಫಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದ ಭಾಗದಲ್ಲಿ ಕಾಫಿ ಹೂವು ಅರಳಿ ನಿಂತಿತ್ತು. ಕೆಲವು ಕಡೆ ಕಾಯಿ ಆಗಿತ್ತು. ಆಲಿಕಲ್ಲು ಮಳೆ ಇದರ ಮೇಲೆ ಪರಿಣಾಮ ಬೀರಲಿದ್ದು, ಬೆಳೆ ಈ ಬಾರಿ ಸಂಪೂರ್ಣ ಕೈ ಕೊಡಲಿದೆ. ಪ್ರಮುಖವಾಗಿ ಈ ವರ್ಷ ಮಾವಿನ ಬೆಳೆ ಹಾಗೂ ಫಸಲು ಅತ್ಯಂತ ಹೆಚ್ಚಾಗಿ ನಿರೀಕ್ಷೆ ಮಾಡಲಾಗಿತ್ತು. ತುಂಬಾ ಕಡೆ ಮಾವಿನ ಹೂವು ಅರಳಿ ನಿಂತಿತ್ತು. ಆಲಿಕಲ್ಲು ಮಳೆ ಈ ಬೆಳೆಯನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದ್ದು, ಅಡಿಕೆ ಅರಳುಗಳು ಉದುರುವಂತೆ ಮಾಡಿವೆ. ಹಾಗೂ ತರಕಾರಿ ಬೆಳೆಗಳ ಮೇಲೂ ಈ ಆಲಿಕಲ್ಲು ಮಳೆ ಪರಿಣಾಮ ಬೀರಿದ್ದು ರೈತರಲ್ಲಿ ಕಣ್ಣಲ್ಲಿ ಕಣ್ಣೀರು ತರಿಸುವಂತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತ ಪಡಿಸಿದರು.
ಕಾಫಿತೋಟ, ಮನೆ, ಮನೆಯಂಗಳದಲ್ಲಿ ಸುರಿದಿರುವ ರಾಶಿ-ರಾಶಿ ಆಲಿಕಲ್ಲು ನೋಡಿ ಮಕ್ಕಳು ಕುಣಿದು ಕುಪ್ಪಳಿಸುತ್ತಿದ್ದರೆ, ಅದೇ ದೃಶ್ಯವನ್ನು ನೋಡಿದ ರೈತರು ಹಾಗೂ ಮನೆಯ ಸದಸ್ಯರು ಕಣ್ಣೀರು ಹಾಕುವಂತಾಗಿದೆ. ಚಿಕ್ಕಮಗಳೂರು ತಾಲೂಕಿನ ಮಾಗಲು, ಸಂಗಮೇಶ್ವರ ಪೇಟೆ, ಖಾಂಡ್ಯ, ಭಾಗದಲ್ಲಿ ಅತಿ ಹೆಚ್ಚು ಭಾರಿ ಮಳೆ ಸುರಿಯುತ್ತಿದೆ. ಆಲಿಕಲ್ಲಿನೊಂದಿಗೆ ಮಕ್ಕಳು ಆಟವಾಡಿ ಪಾತ್ರೆಯಲ್ಲಿ ತುಂಬಿಟ್ಟು ಖುಷಿ ಪಡುತ್ತಿದ್ದಾರೆ. ಚಿಕ್ಕಮಗಳೂರು, ಶೃಂಗೇರಿ ರಾಜ್ಯ ಹೆದ್ದಾರಿಯ ಕೂದುವಳ್ಳಿಯಲ್ಲಿ ರಸ್ತೆ ತುಂಬಾ ಆಲಿಕಲ್ಲು ಮಳೆ ಬೀಳುತ್ತಿದ್ದು, ಇಲ್ಲಿಯೂ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.
ಒಟ್ಟಿನಲ್ಲಿ ಕಾಫಿನಾಡು, ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಕಂಡು ಕೇಳರಿಯದ ರೀತಿಯಲ್ಲಿ ಮುಂದುವರೆದಿದ್ದು, ಮಲೆನಾಡಿಗರು ಹೈರಾಣಾಗುವಂತಾಗಿದೆ.
