Monday, April 13, 2026
Homeಜಿಲ್ಲಾಸುದ್ದಿಎನ್. ಆರ್.ಪುರ: ಗ್ರಾಮಸ್ಥರ ಬೇಡಿಕೆ ಇಂದು ನನಸಾದ ಕನಸು: ದಶಕಗಳ ಕಾಲದ ಹೊನ್ನಕೂಡಿಗೆ ಸೇತುವೆ ಸಿಎಂರಿಂದ...

ಎನ್. ಆರ್.ಪುರ: ಗ್ರಾಮಸ್ಥರ ಬೇಡಿಕೆ ಇಂದು ನನಸಾದ ಕನಸು: ದಶಕಗಳ ಕಾಲದ ಹೊನ್ನಕೂಡಿಗೆ ಸೇತುವೆ ಸಿಎಂರಿಂದ ಲೋಕಾರ್ಪಣೆ!

ಎನ್. ಆರ್.ಪುರ: ಕಾಫಿನಾಡಿನ ನರಸಿಂಹರಾಜಪುರ ತಾಲೂಕಿನ ಜನರ ದಶಕಗಳ ಕಾಲದ ಮಹದಾಸೆ ಹೊನ್ನಕೂಡಿಗೆ ಗ್ರಾಮಕ್ಕೆ ಭದ್ರಾ ಹಿನ್ನೀರಿನಲ್ಲಿದ್ದ ಹಳೇ ರಸ್ತೆಗೆ ಸೇತುವೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂಬ ಗ್ರಾಮಸ್ಥರ ಬೇಡಿಕೆ ಈಡೇರಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸೇತುವೆಯನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

ಭದ್ರಾ ಅಣೆಕಟ್ಟೆ ನಿರ್ಮಾಣಕ್ಕೂ ಮುಂಚೆ ತಾಲ್ಲೂಕು ಕೇಂದ್ರದಿಂದ ಹೊನ್ನೆಕೂಡಿಗೆ, ಹಂದೂರು, ಚಿನ್ನಕೂಡಿಗೆ, ಚಿಕ್ಕಂದೂರು ಮಾರ್ಗವಾಗಿ ನಾಗೇಸಾಲೂರು, ಬಿಳಾಲ್ ಕೊಪ್ಪ, ಕಲ್ಮನೆಯ ಮೂಲಕ ಭದ್ರಾನದಿಗೆ ಮತ್ತು ಹೆಬ್ಬೆ ಗ್ರಾಮದಲ್ಲಿದ್ದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿತ್ತು. ಭದ್ರಾ ಅಣೆಕಟ್ಟು ನಿರ್ಮಾಣದ ಬಳಿಕ ಹಿನ್ನೀರು ಆವರಿಸಿ ಈ ಸಂಪರ್ಕ ಕಡಿದು ಹೋಯಿತು. ಬದಲಾಗಿ ಬಿ.ಎಚ್. ಕೈಮರ ಶಾಂತಿಭವನ ಮಾರ್ಗವಾಗಿ ಹೊನ್ನೆಕೂಡಿಗೆ ಗ್ರಾಮಕ್ಕೆ ಹೊಸರಸ್ತೆ ನಿರ್ಮಾಣ ಮಾಡಲಾಯಿತು.

ಈ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 1980ರ ದಶಕದಲ್ಲಿ ಕೆ.ಟಿ. ಚಿನ್ನೇಗೌಡರು ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿದ್ದಾಗ ಚಿಂತನೆ ನಡೆಸಲಾಗಿತ್ತು. ಆದರೆ, ಅದು ಕಾರ್ಯಗತವಾಗಿರಲಿಲ್ಲ ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. 2008ರಲ್ಲಿ ಹಂದೂರು ಗ್ರಾಮದಲ್ಲಿ ನಡೆದ ಗ್ರಾಮ ಸಂಪರ್ಕ ಸಭೆಯಲ್ಲಿ ಅಂದಿನ ಜಿಲ್ಲಾಧಿಕಾರಿ ನವೀನ್‌ರಾಜ್ ಸಿಂಗ್ ಅವರ ಗಮನಕ್ಕೆ ತಂದಾಗ ₹20 ಲಕ್ಷ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದರು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.

ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಯರು ಹಲವು ಬಾರಿ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 2016ರ ಜೂನ್ 3ರಂದು ಪಟ್ಟಣಕ್ಕೆ ಬಂದಿದ್ದ ಸಂದರ್ಭ ನರಸಿಂಹರಾಜಪುರ ಎಂದು ನಾಮಾಕಿಂತಗೊಂಡು 100 ವರ್ಷಗಳಾದ ಸ್ಮರಣಾರ್ಥ ₹4.90 ಕೋಟಿ ವೆಚ್ಚದ ಹೊನ್ನೆಕೂಡಿಗೆ ಗ್ರಾಮಕ್ಕೆ ಹತ್ತಿರದ ಸಂಪರ್ಕದ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಅಂದಿನ ವಿಧಾನಪರಿಷತ್ ಸದಸ್ಯರಾಗಿದ್ದ ಎಂ. ಶ್ರೀನಿವಾಸ್ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಅನುದಾನ ನೀಡಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದರು. ತಾಂತ್ರಿಕ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಕ್ರಿಯಾಯೋಜನೆ ರೂಪಿಸಿದಾಗ ₹20 ಕೋಟಿ ವೆಚ್ಚ ತಗುಲುವುದಾಗಿ ವರದಿ ನೀಡಿತ್ತು.

ಎಂ. ಶ್ರೀನಿವಾಸ್ ಅವರು ಮುಖ್ಯಮಂತ್ರಿಗೆ ಮನವಿ ಮಾಡಿ, ಉಳಿದ ಅನುದಾನವನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸಿದ್ದರು. 2017ರ ನ. 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಪುನಃ ತಾಂತ್ರಿಕ ಸಮಿತಿಯ ಸಲಹೆ ಮೇರೆಗೆ ಸೇತುವೆ ನಿರ್ಮಾಣಕ್ಕೆ 34.85 ಕೋಟಿ ಅನುದಾನ ಬಿಡುಗಡೆಯಾಯಿತು. 2018ರಲ್ಲಿ ಆರಂಭವಾಗಿದ್ದ ಕಾಮಗಾರಿ 2021ರಲ್ಲಿ ಪೂರ್ಣಗೊಳ್ಳಬೇಕಿತ್ತು. ಸರ್ಕಾರದ ಬದಲಾವಣೆ, ಕೋವಿಡ್, ಅತಿವೃಷ್ಟಿ ಮತ್ತಿತರ ಕಾರಣಗಳಿಂದ ಕಾಮಗಾರಿ ಕುಂಟುತ್ತ ಸಾಗಿತ್ತು. ಪ್ರಸ್ತುತ ₹38.50 ಕೋಟಿ ವೆಚ್ಚದಲ್ಲಿ 504 ಮೀಟರ್ ಉದ್ಯದ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ.

ರಾತ್ರಿ ವೇಳೆ ಸೇತುವೆ ಮೇಲೆ ಸಂಚರಿಸಲು ಅನುಕೂಲವಾಗುವಂತೆ 36 ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ. ಹೊನ್ನೆಕೂಡಿಗೆ ಗ್ರಾಮಕ್ಕೆ ಸುತ್ತಿಬಳಸಿ ಹೋಗುತ್ತಿದ್ದುದರಿಂದ ಪಟ್ಟಣಕ್ಕೆ 20ಕಿ.ಮೀ. ದೂರವಾಗುತ್ತಿತ್ತು ಹೊಸ ಸೇತುವೆ ನಿರ್ಮಾಣ ಮಾಡಿರುವುದರಿಂದ 4ರಿಂದ 5ಕಿ.ಮೀ ಶ್ರಮಿಸಿ ಪಟ್ಟಣಕ್ಕೆ ತಲುಪಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!