Sunday, April 19, 2026
Homeಜಿಲ್ಲಾಸುದ್ದಿಬಿ.ಹೊಸಹಳ್ಳಿಯಲ್ಲಿ ಗೆಳೆಯರ ಬಳಗದ ವತಿಯಿಂದ ಸಂಭ್ರಮದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಬಿ.ಹೊಸಹಳ್ಳಿಯಲ್ಲಿ ಗೆಳೆಯರ ಬಳಗದ ವತಿಯಿಂದ ಸಂಭ್ರಮದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಕೊಟ್ಟಿಗೆಹಾರ:ಗೆಳೆಯರ ಬಳಗದ ವತಿಯಿಂದ ಬಿ ಹೊಸಹಳ್ಳಿ ಗ್ರಾಮದಲ್ಲಿ ಬೋಧಿಸತ್ವ, ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜಯಂತಿಯನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ವಾಹನದಲ್ಲಿ ಮೆರವಣಿಗೆ ನಡೆಸಿ, ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ರವಿ ಹೆಚ್ ಎಂ, ಜೆಸಿಐ ಮಾಜಿ ಅಧ್ಯಕ್ಷ ಕೃಷ್ಣೆಗೌಡ್ರು ಸೇರಿದಂತೆ ಊರಿನ ಹಿರಿಯರು, ಯುವಕರು ಮತ್ತು ಮಕ್ಕಳು ಭಾಗವಹಿಸಿದರು. ಬಳಿಕ ಸಿಹಿ ವಿತರಣೆ ಮಾಡಿ, ನಾಸಿಕ್ ಡೋಲ್ ಹಾಗೂ ಸುಗ್ಗಿ ಕುಣಿತದೊಂದಿಗೆ ಗ್ರಾಮ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

ತದನಂತರ ಸಮುದಾಯ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕುಮಾರಿ ಅಶ್ವಿನಿ ಮತ್ತು ತಂಡದಿಂದ ಭೀಮಗೀತೆ ಗಾಯನ ನಡೆಯಿತು. ಯುವ ಶಿಕ್ಷಕಿ ರಂಜಿತಾ ಕಾರ್ಯಕ್ರಮಕ್ಕೆ ಗಣ್ಯರನ್ನು ಸ್ವಾಗತಿಸಿದರು.

ಯುವ ಉಪನ್ಯಾಸಕಿ ಮಾನವಿ ಭಾರತದ ಶ್ರೇಷ್ಠ ಗ್ರಂಥವಾದ ಸಂವಿಧಾನದ ಪೀಠಿಕೆಯ ಪ್ರಸ್ತಾವನೆಯನ್ನು ಬೋಧಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವ ವಕೀಲ ಚಂದ್ರಶೇಖರ್ ಕಲ್ಗುಡ್ಡ ಅವರು ಮಾತನಾಡಿ, ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನವು ದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದೆ ಎಂದು ತಿಳಿಸಿದರು. ಕಾನೂನುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಜೆಸಿಐ ಮಾಜಿ ಅಧ್ಯಕ್ಷ ಕೃಷ್ಣೆಗೌಡ್ರು ಮಾತನಾಡಿ, ಕಾನೂನು ಎಲ್ಲರಿಗೂ ಸಮಾನವಾಗಿದೆ ಎಂದು ಹೇಳಿ, ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ನಿವೃತ್ತ ಉಪನ್ಯಾಸಕಿ ಹಾಗೂ ರಾಜ್ಯ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪುರಸ್ಕೃತರಾದ ಸಾವಿತ್ರಿ ಮಹೇಂದ್ರ ಮೌರ್ಯ ಅವರು ಮಹಿಳೆಯರ ಸಬಲೀಕರಣದ ಅಗತ್ಯತೆಯನ್ನು ವಿವರಿಸಿ, ಸಮುದಾಯ ಭವನಕ್ಕೆ ಫ್ಯಾನ್ ವ್ಯವಸ್ಥೆ ಕಲ್ಪಿಸುವುದಾಗಿ ಘೋಷಿಸಿದರು.

ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ಮಹೇಂದ್ರ ಮೌರ್ಯ ಅವರು ಯುವಜನತೆ ಶಿಕ್ಷಣ ಮತ್ತು ಸಂವಿಧಾನಾತ್ಮಕ ಮೌಲ್ಯಗಳತ್ತ ಮುಖ ಮಾಡಬೇಕು ಎಂದು ಕರೆ ನೀಡಿ, ಪ್ರತಿವರ್ಷ SSLC ಮತ್ತು PUC ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವುದಾಗಿ ಹಾಗೂ ಊರಿಗೆ ಅಂಬೇಡ್ಕರ್ ಪ್ರತಿಮೆ ಕೊಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಶಾಲು-ಹಾರಗಳಿಂದ ಸನ್ಮಾನಿಸಿ, ವಿವಿಧ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನಿಗಳನ್ನು ವಿತರಿಸಲಾಯಿತು.

ಈ ಗೌರವದ ವೇದಿಕೆಯಲ್ಲಿ ವೃತ್ತಿಯಲ್ಲಿ ನಿವೃತ್ತರಾದ ಮಹೇಂದ್ರ ಮೌರ್ಯ ಮತ್ತು ಸಾವಿತ್ರಿ ಮೌರ್ಯರನ್ನು ದಂಪತಿಗಳನ್ನು ಅಭಿನಂದಿಸಲಾಯಿತು.

ಅಂತಿಮವಾಗಿ ಅಧ್ಯಕ್ಷರಾದ ರವಿ ಹೆಚ್ ಎಂ ಧನ್ಯವಾದಗಳನ್ನು ಅರ್ಪಿಸಿ, ಗೋಪಾಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಭೀಮಗೀತೆಗಳು ಮತ್ತು ನೃತ್ಯಗಳು ನಡೆದವು. ಗ್ರಾಮಸ್ಥರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!