ಎನ್.ಆರ್. ಪುರ: ನಕಲಿ ಛಾಪಕಾಗದ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ ಆರೋಪದ ಮೇಲೆ ಡಿಜಿಟಲ್ ಸಂಸ್ಥೆ ಮತ್ತು ಗುತ್ತಿಗೆದಾರನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ನರಸಿಂಹರಾಜಪುರ ಉಪವಿಭಾಗದ ವ್ಯಾಪ್ತಿಯಲ್ಲಿ ಜೆಜೆಎಂ ಹಾಗೂ ಟಾಸ್ಕ್‌ಪೋರ್ಸ್ ಯೋಜನೆಯಡಿ ಕೊಳವೆಬಾವಿ ಕಾಮಗಾರಿ ನಿರ್ವಹಣೆ ಮಾಡಲು ಕರಾರು ಪತ್ರದಲ್ಲಿ ಒಪ್ಪಂದ ನಡೆದಿತ್ತು. ಗುತ್ತಿಗೆದಾರರು ಮತ್ತು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ನಡುವೆ ಒಪ್ಪಂದ ಏರ್ಪಟ್ಟಿತ್ತು.
2026ರ ಮಾರ್ಚ್‌ನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಬಿಜೆಪಿ ಮುಖಂಡ ಡಿ.ಎನ್. ಜೀವರಾಜ್, ಗುತ್ತಿಗೆದಾರರು ಕೊರೆದಿರುವ ಕೊಳವೆಬಾವಿಗಳಿಗೆ ನಕಲಿ ಛಾಪಾ ಕಾಗದಗಳನ್ನು ನೀಡಿ ಕರಾರು ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಬಳಿಕ ಎಂಜಿನಿಯರ್‌ಗಳು ಪರಿಶೀಲಿಸಿದ್ದು, 14 ಛಾಪಾ ಕಾಗದಗಳು ಪುನರಾವರ್ತನೆ ಆಗಿರುವುದು ಕಂಡುಬಂದಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುನಿಲ್‌ಕುಮಾರ್ ಪೊಲೀಸರಿಗೆ ದೂರು ನೀಡಿದ್ದರು.
ಕರಾರು ಪತ್ರಗಳನ್ನು ನೀಡಿರುವ ಆಯಿರಾ ಡಿಜಿಟಲ್ ಸಂಸ್ಥೆ ಮತ್ತು ಕರಾರು ಮಾಡಿಕೊಂಡಿರುವ ಎಸ್‌ಕೆಪಿ ಕನ್‌ಸ್ಟ್ರಕ್ಷನ್ ಆ್ಯಂಡ್ ಬೂರ್‌ವೆಲ್ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೆಲ ಕಾಗದಗಳು 6 ಬಾರಿ ಪುನರಾವರ್ತನೆ ಆಗಿವೆ. ಕೆಲವು 2 ಬಾರಿ ಪುನರಾವರ್ತನೆ ಆಗಿವೆ. ಒಟ್ಟು 14 ನಕಲಿ ಛಾಪಾ ಕಾಗದಗಳನ್ನು ಸೃಷ್ಟಿ ಮಾಡಲಾಗಿದೆ ಎಂದು ದೂರಿದ್ದಾರೆ
