Saturday, July 11, 2026
Homeಜಿಲ್ಲಾಸುದ್ದಿDeepak Doddaiah: ಮಾನವ-ಕಾಡುಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸದಿದ್ರೆ ಉಗ್ರ ಹೋರಾಟ : ದೀಪಕ್ ದೊಡ್ಡಯ್ಯ...

Deepak Doddaiah: ಮಾನವ-ಕಾಡುಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸದಿದ್ರೆ ಉಗ್ರ ಹೋರಾಟ : ದೀಪಕ್ ದೊಡ್ಡಯ್ಯ ಎಚ್ಚರಿಕೆ

Telegram Group
Join Now

ಮೂಡಿಗೆರೆ:  ವಿಧಾನಸಭಾ ಕ್ಷೇತ್ರದ ಬಾಳೂರು ಹೋಬಳಿಯ ಬಿಳಗಲಿ ಗ್ರಾಮದ ಸಮೀಪದ ನೊಸಿಹದ್ಲು ಗ್ರಾಮದಲ್ಲಿ ನಡೆದಿರುವ ಅಮಾನವೀಯ ಘಟನೆ ಇಡೀ ಕ್ಷೇತ್ರದ ಜನತೆಯನ್ನು ಬೆಚ್ಚಿಬೀಳಿಸಿದೆ…
ಕೃಷ್ಣೇಗೌಡ (ತಮ್ಮಯ್ಯ) ಅವರ ಧರ್ಮಪತ್ನಿ ಶ್ರೀಮತಿ ಶೀಲಾ ಅವರು ತಮ್ಮ ಎರಡು ಎಕರೆ ಸ್ವಂತ ಕಾಫಿ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸುಮಾರು 25 ರಿಂದ 30 ಕಾಡು ಕೋಣಗಳ ಹಿಂಡು ದಾಳಿ ನಡೆಸಿದ್ದು, ಹಿಂಡಿನಲ್ಲಿದ್ದ ಬೃಹತ್ ಕಾಡು ಕೋಣ ಅವರ ಮೇಲೆ ಮಾರಣಾಂತಿಕವಾಗಿ ಎರಗಿದೆ..

ಗಂಭೀರವಾಗಿ ಗಾಯಗೊಂಡ ಅವರನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮಾರ್ಗಮದ್ಯೆ ಮೃತಪಟ್ಟಿರುವುದು ಅತ್ಯಂತ ದುಃಖಕರ ಹಾಗೂ ಖಂಡನೀಯ ಸಂಗತಿಯಾಗಿದೆ….

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಶ್ರೀ ದೀಪಕ್ ದೊಡ್ಡಯ್ಯ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, “ಅರಣ್ಯ ಇಲಾಖೆ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ ಇಂದು ಮತ್ತೊಂದು ಅಮಾಯಕ ಜೀವ ಬಲಿಯಾಗುತ್ತಿರಲಿಲ್ಲ. ಸರ್ಕಾರ ಮತ್ತು ಅರಣ್ಯ ಇಲಾಖೆ ರೈತರ ಜೀವವನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿವೆ” ಎಂದು ಕಿಡಿಕಾರಿದರು.

ಶ್ರೀ ಶೀಲಾ ಅವರ ಕುಟುಂಬ ಅತ್ಯಂತ ಸಂಕಷ್ಟದಲ್ಲಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದ್ದರಿಂದ ಸರ್ಕಾರ ತಕ್ಷಣವೇ ನಿಯಮಾನುಸಾರ ಪರಿಹಾರ ನೀಡುವುದರ ಜೊತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವಿಶೇಷ ಪರಿಹಾರ ಧನ ಘೋಷಿಸಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಅರಣ್ಯ ಇಲಾಖೆ ಅಥವಾ ಸೂಕ್ತ ಸರ್ಕಾರಿ ಇಲಾಖೆಯಲ್ಲಿ ಶಾಶ್ವತ ಉದ್ಯೋಗ ನೀಡಬೇಕು. ಇಬ್ಬರು ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು. ಕುಟುಂಬದ ಜೀವನೋಪಾಯಕ್ಕಾಗಿ ಮಾಸಿಕ ಧನಸಹಾಯವನ್ನು ಮಂಜೂರು ಮಾಡಬೇಕು ಎಂದು ಶ್ರೀ ದೀಪಕ್ ದೊಡ್ಡಯ್ಯ ಆಗ್ರಹಿಸಿದರು…..

ಘಟನೆಯ ಸ್ಥಳದಲ್ಲಿಯೇ ಡಿಎಫ್‌ಒ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶ್ರೀ ದೀಪಕ್ ದೊಡ್ಡಯ್ಯ ಅವರು, ಮೃತರ ಕುಟುಂಬಕ್ಕೆ ಶೀಘ್ರದಲ್ಲೇ ಪರಿಹಾರ ಧನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.. ಜೊತೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿಶೇಷ ಆರ್ಥಿಕ ನೆರವು ನೀಡುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು…

ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಆನೆ, ಕಾಡು ಕೋಣ ಸೇರಿದಂತೆ ಕಾಡುಪ್ರಾಣಿಗಳ ದಾಳಿಯಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ರೈತರು ಹಾಗೂ ಸಾರ್ವಜನಿಕರು ಜೀವ ಕಳೆದುಕೊಂಡಿದ್ದಾರೆ. ಆಗಲೂ ರಾಜ್ಯ ಸರ್ಕಾರದ ಗಮನ ಸೆಳೆಯಲು ಹೋರಾಟಗಳು, ಧರಣಿಗಳು ಹಾಗೂ ಮನವಿಗಳನ್ನು ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಲಾಗಿತ್ತು. ಆದರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದೇ ಇರುವುದರಿಂದ ಇಂತಹ ದುರಂತಗಳು ಮರುಕಳಿಸುತ್ತಿವೆ ಎಂದು ಅವರು ಆರೋಪಿಸಿದರು….

“ಇನ್ನು ಮುಂದೆ ಸರ್ಕಾರದ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಮಾನವ-ಕಾಡುಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ, ರೈತರ ಜೀವ ರಕ್ಷಿಸುವ ಕೆಲಸವನ್ನು ತಕ್ಷಣ ಆರಂಭಿಸಬೇಕು. ಇಲ್ಲವಾದರೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ರೈತರು ಹಾಗೂ ಸಾರ್ವಜನಿಕರನ್ನು ಸಂಘಟಿಸಿ ಬೃಹತ್ ಉಗ್ರ ಹೋರಾಟವನ್ನು ನಡೆಸಲಾಗುವುದು. ಅದರ ಸಂಪೂರ್ಣ ಹೊಣೆ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಯ ಮೇಲಿದೆ” ಎಂದು ಶ್ರೀ ದೀಪಕ್ ದೊಡ್ಡಯ್ಯ ಎಚ್ಚರಿಕೆ ನೀಡಿದರು….

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು ಸ್ಥಳೀಯ ಶಾಸಕಿ ಶ್ರೀಮತಿ ನಯನ ಮೊಟ್ಟಮ್ಮ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡದೇ ಹಾಗೂ ಮೃತರ ಕುಟುಂಬದ ನೋವಿಗೆ ಸ್ಪಂದಿಸದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ಗಜೇಂದ್ರ, ಮುಖಂಡರಾದ ಬಾಳೂರು ಮಂಜು, ಪಕ್ಷದ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಸಲ್ಲಿಸಿದರು. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರದ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು…

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments