ಗ್ಯಾರಂಟಿ ಯೋಜನೆಯಿಂದ ಹಳ್ಳಿ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆಗೆ ಹೆಚ್ ಡಿ ಕುಮಾರಸ್ವಾಮಿ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ನಗರದ ಜೆಪಿ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ತುಮಕೂರಿನಲ್ಲಿ ಗ್ಯಾರಂಟಿ ಕುರಿತಾಗಿ ನಾನು ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ನವರು ತಿರುಚಿದ್ದಾರೆ. ಮಹಿಳೆಯರಿಗೆ ಗೌರವ ಕೊಡುವುದನ್ನು ಡಿ ಕೆ ಶಿವಕುಮಾರ್ ರವರಿಂದ ಕಲಿಯಬೇಕಾಗಿಲ್ಲ. ಅವರಿಗಿಂತ ಹೆಚ್ಚಾಗಿ ಮಹಿಳೆಯರನ್ನು ಗೌರವಿಸುತ್ತೇನೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.
ಗ್ಯಾರಂಟಿ ಯೋಜನೆ ಹೇಳಿಕೆ ಖಂಡಿಸಿ ಕಾಂಗ್ರೆಸ್ ನ ಹಲವು ಮಹಿಳೆಯರು, ಸೋಮವಾರ ಎಚ್ ಡಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದರು. ಅದರ ಬೆನ್ನಲೇ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಪಿಕ್ ಪಾಕೆಟ್ ಮಾಡಿ, ಗ್ಯಾರಂಟಿಯ ಎರಡು ಸಾವಿರ ಕೊಟ್ಟಿದ್ದಾರೆ. ಅದಕ್ಕೆ ದಾರಿ ತಪ್ಪಬೇಡಿ ಅಂತ ಹೇಳಿದ್ದೇನೆ. ನನ್ನ ಅವಧಿಯಲ್ಲಿ ಸಾರಾಯಿ ನಿಷೇಧ ಮಾಡಿದೆ. ಮಹಿಳೆಯರಿಗೆ ಗೌರವ ಕೊಡಲು ನಾನು ಸಾರಾಯಿ ನಿಷೇಧ ಮಾಡಿದ್ದು ತಪ್ಪಾ. ಹೌದು, ನಾನು ದಾರಿತಪ್ಪಿದ್ದೆ, ಅದನ್ನು ಈ ಹಿಂದೆಯೇ ಸದನದಲ್ಲಿ ಹೇಳಿದ್ದೇನೆ. ನನ್ನ ಪತ್ನಿ ನನ್ನನ್ನು ತಿದ್ದಿದ್ದಾಳೆ ಎಂದರು.
ಅಷ್ಟೇ ಅಲ್ಲದೇ ಕಂಗನ ರಾವತ್ ಅವರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಮಹಿಳೆಯರಿಗೆ ರೆಟ್ ಫಿಕ್ಸ್ ಮಾಡಿದ್ರಿ ಅಂತ ಹೇಳಿದ್ರಿ. ಇದಕ್ಕೆ ನಿಮ್ಮ ಸೋನಿಯ ಗಾಂಧಿ ಏನು ಹೇಳುತ್ತಾರೆ. ಕೆಲವು ಕುಟುಂಬದ ಹೆಣ್ಣು ಮಕ್ಕಳನ್ನು ಅಪಹರಿಸಿ, ಜಮೀನು ಬರೆಸಿಕೊಂಡಾಗ ಅವರಿಗೆ ಕಣ್ಣೀರು ಬರಲಿಲ್ಲ. ಶಾಮನೂರು ಶಿವಶಂಕರಪ್ಪನವರು ಇತ್ತೀಚೆಗೆ ಹೆಣ್ಮಕ್ಕಳು ಅಡುಗೆ ಮನೆಯಿಂದ ಹೊರಬರಬಾರದು ಅಂದರು. ನಿಮ್ಮ ಪಕ್ಷದವರ ಹೇಳಿಕೆ ಕುರಿತು ನೂರಾರು ನಿದರ್ಶನಗಳನ್ನು ಕೊಡಬಲ್ಲೆ. ನಿಮ್ಮಿಂದ ನಾನು ಕಲಿಯಬೇಕಾ ಎಂದು ಕಾಂಗ್ರೆಸ್ ನಾಯಕರಿಗೆ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ಕೊಟಿದ್ದಾರೆ.