ಶೃಂಗೇರಿ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕಿನ ಸರ್ಕಾರಿ ಕಂದಾಯ ಜಮೀನುಗಳಲ್ಲಿ ಸೊಪ್ಪಿನಬೆಟ್ಟ ಅಂತ ಕರೆಯಲ್ಪಡುವ ನಂ.50,53,57 ಮತ್ತು 94,94ಸಿ ಜಮೀನಿದ್ದು,ಇಲ್ಲಿ ರೈತರು ಹಲವಾರು ವರ್ಷಗಳಿಂದ ಕೃಷಿ ಮತ್ತು ವಾಸ ಮಾಡುತ್ತಿದ್ದಾರೆ. ಆದರೆ ಕಾನೂನಿನಡಿಯಲ್ಲಿ ಈ ಜಮೀನಿಗೆ ಹಕ್ಕುಪತ್ರ ಹಾಗೂ ಸಾಗುವಳಿ ಚೀಟಿ ಪಡೆಯುವ ಅವಕಾಶ ಇಲ್ಲವೆಂದು ಹೇಳುತ್ತಿದ್ದು,ರೈತರು ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಬಳಸುವ ಪಕ್ಕದ ಜಮೀನಿನಲ್ಲಿ ಜಾಗ ಬಿಟ್ಟು,ಸೊಪ್ಪಿನ ಬೆಟ್ಟದಲ್ಲಿ ವಾಸದ ಮನೆಗೆ ಹಕ್ಕುಪತ್ರ ಹಾಗೂ ಕೃಷಿ ಜಮೀನಿಗೆ ಸಾಗುವಳಿ ಚೀಟಿ ಕೊಡಬೇಕು.
ಹಾಗೆ ಸಕ್ಷೆನ್ 4(1) ಅರ್ಜಿ ವಿಳಂಬವಾಗುತ್ತಿದ್ದು,ಸರ್ಕಾರಿ ಜಮೀನಿನಲ್ಲಿ ಕೃಷಿ ಅಥವಾ ವಾಸ ಮಾಡುತ್ತಿರುವ ರೈತರು ಕಾರ್ಮಿಕರ ಮನೆ ನಿರ್ಮಾಣಕ್ಕೆ ಅರ್ಜಿ ಹಾಕಿದ್ದಲ್ಲಿ 4(1) ರದ್ದುಮಾಡಿ,ಮೊದಲು ಅರ್ಜಿ ಹಾಕಿದವರ ಅರ್ಜಿಯನ್ನು ತಕ್ಷಣ ಪರಿಶೀಲಿಸಿ ಕೃಷಿ ಜಮೀನನ್ನು ಬಿಡುಗಡೆಗೊಳಿಸಬೇಕು.
ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಳೆ ಮಾಪನ ಸರಿಯಾಗಿ ಆಗದೇ ಈಗಾಗಲೇ ಬೆಳೆ ಪ್ರೀಮಿಯಂ ಕಟ್ಟಿದ ರೈತರು ವಿಮೆ ಪಡೆಯಲು ಕಷ್ಟವಾಗಿದೆ. ಆದ್ದರಿಂದ ಗ್ರಾಂ ಪಂಗಳಲ್ಲಿನ ಮಳೆ ಮಾಪನ ಕೇಂದ್ರಗಳನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿ ರೈತರಿಗೆ ಸೂಕ್ತ ಬೆಳೆ ವಿಮೆ ಸಿಗುವಲ್ಲಿ ಸಹಕರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿ ಮನವಿ ಸಲ್ಲಿಸಲಾಯಿತು.
