ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಗಾಳಿ ಮಳೆಯ ಅಬ್ಬರ ಜೋರಾಗಿದೆ. ನಿರಂತರ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ-ಪದೇ ಗುಡ್ಡ ಕುಸಿಯುತ್ತಿದೆ.
ಶೃಂಗೇರಿ ತಾಲೂಕಿನ ಸುತ್ತಮುತ್ತ ನಿರಂತರವಾಗಿರೋ ಮಳೆಯಿಂದ ನಾನಾ ಅವಾಂತರಗಳು ಸೃಷ್ಠಿಯಾಗಿವೆ. ಶೃಂಗೇರಿ ತಾಲೂಕಿನ ಕಡೇಮನೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬೃಹತ್ ಗುಡ್ಡ ಕುಸಿದು ಬಿದ್ದಿದೆ.
ಗಾಳಿ-ಮಳೆ ಹೆಚ್ಚಾದಂತೆ ರಸ್ತೆ ಬದಿಯ ಗುಡ್ಡವು ಮರಗಳ ಸಮೇತ ಧರೆಗೆ ಉರುಳಿದ್ದು, ರಾಷ್ಟ್ರೀಯ ಹೆದ್ದಾರಿ 169ರ ಕಾರ್ಕಳ-ಮಂಗಳೂರು- ಶೃಂಗೇರಿ ನಡುವಿನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ರಸ್ತೆಗೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣು ಮತ್ತು ಉರುಳಿ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ.
ಆದರೆ, ಮಳೆ ಮುಂದುವರಿಯುತ್ತಿರುವುದರಿಂದ ಸ್ವಲ್ಪ ಸ್ವಲ್ಪವೇ ಮಣ್ಣು ಜಾರುತ್ತಿದ್ದು, ತೆರವು ಕಾರ್ಯ ಸವಾಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಈ ಮಾರ್ಗದಲ್ಲಿ ಮಳೆ ಹೆಚ್ಚಾದಂತೆಲ್ಲ ಭೂಮಿಯ ತೇವಾಂಶ ಹೆಚ್ಚಾಗಿ ದೊರೆಕುಸಿತ ಪ್ರಕರಣಗಳು ಹೆಚ್ಚಾಗುತ್ತಿರೋದು ಸಾರ್ವಜನಿಕ ವಲಯದಲ್ಲಿ ಆತಂಕ ಹುಟ್ಟಿಸಿದೆ.
