ಕಳಸ: ಮೊಬೈಲ್ಗೆ ಅಪರಿಚಿತ ಎಪಿಕೆ (APK) ಫೈಲ್ ಡೌನ್ಲೋಡ್ ಆಗುವ ಮೂಲಕ ವೈಯಕ್ತಿಕ ಬ್ಯಾಂಕಿಂಗ್ ವಿವರಗಳನ್ನು ಕದ್ದು, ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು ₹1,27,999 ಹಣವನ್ನು ವರ್ಗಾವಣೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳಸ ಮೂಲದ 69 ವರ್ಷದ ಕರುಣಾಕರ ಎಂ.ಸಿ. ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಕಳಸದಲ್ಲಿರುವ ಕರ್ನಾಟಕ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ನಲ್ಲಿ ಅವರು ಖಾತೆ ಹೊಂದಿದ್ದು, ಎರಡೂ ಖಾತೆಗಳಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದ್ದರು.
ಆಗಸ್ಟ್ 17ರಂದು ಕರ್ನಾಟಕ ಬ್ಯಾಂಕ್ ಖಾತೆಯಿಂದ ₹99,999 ಡೆಬಿಟ್ ಆಗಿರುವ ಕುರಿತು ಮೊಬೈಲ್ಗೆ ಸಂದೇಶ ಬಂದಿದ್ದು, ತಮ್ಮ ಗಮನಕ್ಕೆ ಬಾರದಂತೆ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಕೂಡಲೇ ಬ್ಯಾಂಕ್ಗೆ ಕರೆ ಮಾಡಿ ಖಾತೆಯನ್ನು ಡೆಬಿಟ್ ಫ್ರೀಜ್ ಮಾಡಿಸಿದ್ದಾರೆ.
ನಂತರ ಕೆನರಾ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ, ಆಗಸ್ಟ್ 18ರಂದು ₹28,000 ಹಣವನ್ನು ತಮ್ಮ ಗಮನಕ್ಕೆ ಬಾರದಂತೆ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ತಮ್ಮ ಮೊಬೈಲ್ನಲ್ಲಿ ಯಾರೋ ಅಪರಿಚಿತ APK ಫೈಲ್ ಡೌನ್ಲೋಡ್ ಮಾಡಿಸಿರುವ ಮೂಲಕ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದು ಹಣ ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ವಂಚನೆ ಕುರಿತು ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ಎರಡು ದೂರುಗಳನ್ನು ದಾಖಲಿಸಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 45/2026ನೇ ಪ್ರಕರಣ ದಾಖಲಾಗಿದ್ದು, ಐಟಿ ಕಾಯ್ದೆಯ ಕಲಂ 66(C), 66(D) ಹಾಗೂ ಬಿಎನ್ಎಸ್ ಕಲಂ 318(4) ಅಡಿಯಲ್ಲಿ ತನಿಖೆ ಕೈಗೊಳ್ಳಲಾಗಿದೆ
