ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ರಸ್ತೆಯಲ್ಲಿರುವ ಪ್ರಸಿದ್ಧ ವೈನ್ ಅಂಡ್ ಡೈನ್ ಹೋಟೆಲ್‌ನ ಫ್ರೂಟ್ ಸಲಾಡ್‌ನಲ್ಲಿ ಹಾವಿನಂತಿರುವ ‘ಹ್ಯಾಮರ್‌ಹೆಡ್’ ಜಂತು ಪತ್ತೆಯಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಈ ಕುರಿತು ಹೋಟೆಲ್ ಮಾಲೀಕ ಥಾಮಸ್ ಸ್ಪಷ್ಟನೆ ನೀಡಿದ್ದು ಇದೊಂದು ಪೂರ್ವನಿಯೋಜಿತ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.
ಹೋಟೆಲ್‌ನ ಹೆಸರಿಗೆ ಮಸಿ ಬಳಿಯುವ ದುರುದ್ದೇಶದಿಂದಲೇ ಕೆಲವರು ಈ ಸುಳ್ಳು ವಿಡಿಯೋ ಸೃಷ್ಟಿಸಿ ಹರಿಬಿಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಕಂಡುಬಂದಿರುವ ಹುಳು ಸಲಾಡ್‌ನ ಒಳಭಾಗದಲ್ಲಿ ಇರಲಿಲ್ಲ ಹಾಗೂ ಅದು ತುಂಡಾಗದೆ ಸಂಪೂರ್ಣ ಜೀವಂತವಾಗಿತ್ತು. ಅದನ್ನು ತೆಗೆದು ಟಿಶ್ಯೂ ಪೇಪರ್ ಮೇಲೆ ಇಟ್ಟಾಗಲೂ ಅದರ ಮೇಲೆ ಸಲಾಡ್‌ನ ಯಾವುದೇ ಬಣ್ಣವಾಗಲಿ ಅಥವಾ ಕುರುಹುಗಳಾಗಲಿ ಇರಲಿಲ್ಲ.
ಘಟನೆ ನಡೆದ ತಕ್ಷಣವೇ ಗ್ರಾಹಕರೊಂದಿಗೆ ಮಾತನಾಡಿ ಅಗತ್ಯವಿದ್ದರೆ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗಿತ್ತು. ಆದರೆ, ಹೋಟೆಲ್‌ನ ಪ್ರತಿಷ್ಠೆಯನ್ನು ಹಾಳುಮಾಡುವ ಉದ್ದೇಶದಿಂದ ವಿಡಿಯೋ ವೈರಲ್ ಮಾಡಿ, ನಂತರ ಅದನ್ನು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಲು ಹಣದ ಬೇಡಿಕೆ (ಬ್ಲ್ಯಾಕ್‌ಮೇಲ್) ಇಟ್ಟಿದ್ದರು ಎಂದು ಮಾಲೀಕರು ದೂರಿದ್ದಾರೆ.
ಈ ಹಣದ ಬೇಡಿಕೆಗೆ ಮಣಿಯದ ಹೋಟೆಲ್ ಆಡಳಿತ ಮಂಡಳಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆ. ಇನ್ನು ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್ ಮತ್ತು ಅಡುಗೆ ಕೋಣೆಯನ್ನು ಸಮಗ್ರವಾಗಿ ಪರಿಶೀಲಿಸಿದ್ದು, ಯಾವುದೇ ಲೋಪದೋಷಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
ಪತ್ತೆಯಾಗಿದೆ ಎನ್ನಲಾದ ಹುಳುವನ್ನು ಪ್ರಯೋಗಾಲಯದ (ಲ್ಯಾಬ್) ಪರೀಕ್ಷೆಗೆ ಒಳಪಡಿಸಲು ನೀಡುವಂತೆ ಕೇಳಿದರೂ ಗ್ರಾಹಕರು ಸ್ಯಾಂಪಲ್ ನೀಡದೆ ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಲೀಕರು ವಿವರಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಕುಟುಂಬ ಸಮೇತ ಬರುವ ಗ್ರಾಹಕರಿಗೆ ಶುಚಿ-ರುಚಿಯಾದ ಸೇವೆ ನೀಡುತ್ತಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
