ಬೆಂಗಳೂರು; ಕುಮಾರಸ್ವಾಮಿ ಮತ್ತು ಡಿಕೆಶಿ ನಡುವೆ ಇದೀಗ ಹೇಡಿ ವಾಕ್ಸಮರ ನಡೆಯುತ್ತಿದೆ. ಇಬ್ಬರು ಘಟಾನುಘಟಿ ನಾಯಕರು ನೀನು ಹೇಡಿ , ನೀನು ಹೇಡಿ ಅಂತ ಒಬ್ಬರನ್ನೊಬ್ಬರು ಟೀಕಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಇಬ್ಬರಿಗೂ ಪ್ರತಿಷ್ಠೆಯ ಕಣವಾಗಿದೆ ಹೀಗಾಗಿ ಈ ಕ್ಷೇತ್ರವನ್ನ ಗೆಲ್ಲಲು ಡಿಸಿಎಂ ಡಿಕೆಶಿವಕುಮಾರ್ , ಮತದಾರರಿಗೆ ಹೇಡಿಯಂತೆ ರಾತ್ರಿಯಿಡೀ ಗಿಫ್ಟ್ ಕೂಪನ್ ವಿತರಿಸಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಕುಮಾರಸ್ವಾಮಿಯವರ ಈ ಆರೋಪಕ್ಕೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಅವರು ನಮ್ಮನ್ನು ನೋಡಿ ಭಯಪಡುತ್ತಿದ್ದಾರೆ. ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಬೇಕಿತ್ತು.ಆದರೆ ಈ ಕ್ಷೇತ್ರದಿಂದ ನಿಂತರೆ ಎಲ್ಲಿ ಸೋತು ಹೋಗ್ತಿನೋ ಅಂತ ಭಯಪಟ್ಟುಕೊಡು, ಹೇಡಿಯಂತೆ ಮಂಡ್ಯಕ್ಕೆ ಓಡಿ ಹೋಗಿದ್ದಾರೆ ಎಂದು ಟೀಕಿಸಿದರು.ಅಲ್ಲದೆ ಕುಮಾರಸ್ವಾಮಿ ಅವರಿಗೆ ನಾಚಿಕೆ ಇಲ್ಲ. ಅವರು ಮತ್ತು ಮುನಿರತ್ನ ಸೇರಿಕೊಂಡು ಮತದಾರರಿಗೆ ಗೋಲ್ಡ್ ಕಾರ್ಡ್‌ಗಳನ್ನು ನೀಡಿ ಆಮಿಷವೊಡ್ಡಿದ್ದಾರೆ ಅಂತ ಆರೋಪ ಮಾಡಿದ್ದಾರೆ.
ಇದಕ್ಕೆಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಣಹೇಡಿ ನಾವಲ್ಲ, ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ರಾತ್ರಿ ಹೋಗಿ ಜನರಿಗೆ ಕ್ಯೂಆರ್ ಕೋಡ್ ಇರುವ ಗಿಫ್ಟ್ ಕೂಪನ್ ವಿತರಿಸಿದ ವ್ಯಕ್ತಿ, ಹೇಡಿತನದ ಬಗ್ಗೆ ಮಾತಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಅಲ್ಲದೆ, 505 ರು ನಗದು, ಮಲೆ ಮಹದೇಶ್ವರ ದೇವಸ್ಥಾನದ ಪ್ರಸಾದ, ಖಾತರಿ ಕಾರ್ಡ್ ಗಳನ್ನು ರಾತ್ರಿಯಿಡೀ ವಿತರಿಸುತ್ತಿದ್ದಾಗ, ಕಾಂಗ್ರೆಸ್ ಕಾರ್ಯಕರ್ತರನ್ನು, ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಡೆದು, ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ.