ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರು ಹೊಸ ರಸ್ತೆ ನಿರ್ಮಾಣಕ್ಕೆ ಆಗ್ರಹಿಸುತ್ತಿರೋ ಸಂದರ್ಭದಲ್ಲೇ ಅಧಿಕಾರಿಗಳು ರಸ್ತೆಗೆ ಬೇಕಾಬಿಟ್ಟಿಯಾಗಿ ತೇಪೆ ಹಾಕುತ್ತಿದ್ದು ಜನ ಮತ್ತೆ ಆಡಳಿತ ವ್ಯವಸ್ಥೆ ವಿರುದ್ಧ ಹರಿಹಾಯ್ದಿದ್ದಾರೆ.
ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ರಸ್ತೆಗಿಂತ ಅಡಿಯಾಳದ ಗುಂಡಿಗಳೇ ಹೆಚ್ಚಿವೆ. ಗುಂಡಿಗಳು ನಿತ್ಯ ಪ್ರಯಾಣಿಕರಿಗೆ ನರಕ ದರ್ಶನ ಮಾಡಿಸುತ್ತಿವೆ. ರಸ್ತೆಯ ದುಃಸ್ಥಿತಿಯಿಂದ ರೊಚ್ಚಿಗೆದ್ದ ಸಾರ್ವಜನಿಕರ ಆಕ್ರೋಶದ ಬಿಸಿ ಮುಟ್ಟುತ್ತಿದ್ದಂತೆ ಕಣ್ತೆರೆದಿರುವ ಅಧಿಕಾರಿಗಳು ಕಾಟಾಚಾರಕ್ಕೆ ಗುಂಡಿ ಮುಚ್ಚುವ ಕೆಲಸಕ್ಕೆ ಇಳಿದಿದ್ದಾರೆ.
ಶಾಶ್ವತ ರಸ್ತೆ ನಿರ್ಮಾಣಕ್ಕೆ ಮುಂದಾಗದ ಅಧಿಕಾರಿಗಳು, ಕೇವಲ ಕಣ್ಣೊರೆಸುವ ತಂತ್ರವಾಗಿ ಅವೈಜ್ಞಾನಿಕ ಹಾಗೂ ಅತ್ಯಂತ ಕಳಪೆ ಮಟ್ಟದ ತೇಪೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಯಾವುದೇ ಗುಣಮಟ್ಟ ಅಥವಾ ತಾಂತ್ರಿಕ ನಿಯಮಗಳನ್ನು ಪಾಲಿಸದ ಈ ಕಾಟಾಚಾರದ ದುರಸ್ತಿ ಕಾರ್ಯ ಮುಂದಿನ ಸಣ್ಣ ಮಳೆಗೂ ಕಿತ್ತುಹೋಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇಂತಹ ಬೇಕಾಬಿಟ್ಟಿ ಕೆಲಸ ಏಕೆ ಮಾಡ್ತೀರಾ. ಮಾಡಬೇಡಿ ಎಂದು ಸಾರ್ವಜನಿಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
