ಕೊಪ್ಪ: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಟಯರ್ ಏಕಾಏಕಿ ಕಳಚಿ ಬಿದ್ದ ಪರಿಣಾಮ, ಬಸ್ಸಿನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಾಗಲಾಪುರ ಸೇತುವೆ ಸಮೀಪ ನಡೆದಿದೆ.
ಶಿವಮೊಗ್ಗ ಡಿಪೋಗೆ ಸೇರಿದ KA 14 F 0121 ನೋಂದಣಿ ಸಂಖ್ಯೆಯ ಕೆಎಸ್ಆರ್ಟಿಸಿ ಬಸ್ ಶೃಂಗೇರಿಯಿಂದ ಶಿವಮೊಗ್ಗದ ಕಡೆಗೆ ಸಂಚರಿಸುತ್ತಿತ್ತು. ನಾಗಲಾಪುರ ಸೇತುವೆ ಸಮೀಪಿಸುತ್ತಿದ್ದಂತೆ ಚಲಿಸುತ್ತಿದ್ದ ಬಸ್ನ ಟಯರ್ ಇದ್ದಕ್ಕಿದ್ದಂತೆ ಕಳಚಿಕೊಂಡು ರಸ್ತೆಗೆ ಉರುಳಿಬಿದ್ದಿದೆ.
ಬಸ್ನ ಟಯರ್ ಕಳಚಿ ಬಿದ್ದ ಕೂಡಲೇ ಎಚ್ಚೆತ್ತ ಚಾಲಕ ಸಮಯಪ್ರಜ್ಞೆ ಮೆರೆದು ಬಸ್ಸನ್ನು ಸುರಕ್ಷಿತವಾಗಿ ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದ ಬಸ್ಸಿನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಸಂಭವಿಸಬಹುದಾಗಿದ್ದ ಭಾರಿ ದುರಂತದಿಂದ ಪಾರಾಗಿದ್ದಾರೆ.
ಇದೇ ವೇಳೆ, ಬಸ್ಸಿನಿಂದ ಕಳಚಿಕೊಂಡ ಟಯರ್ ವೇಗವಾಗಿ ರಸ್ತೆಯಲ್ಲಿ ಉರುಳಿಕೊಂಡು ಹೋಗಿ ಮತ್ತೊಂದು ವಾಹನಕ್ಕೆ ಬಡಿದಿದೆ. ಪರಿಣಾಮ, ಆ ವಾಹನಕ್ಕೆ ಹಾನಿಯಾಗಿದೆ. ಘಟನೆಯಿಂದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿದ್ದು, ಜೀವಭಯದಿಂದ ರಸ್ತೆಯಲ್ಲೇ ಕುಳಿತು ನಿಟ್ಟುಸಿರು ಬಿಟ್ಟಿದ್ದಾರೆ.
ಕೆಎಸ್ಆರ್ಟಿಸಿ ಬಸ್ನ ಟಯರ್ ಚಲಿಸುತ್ತಿರುವಾಗಲೇ ಕಳಚಿ ಬಿದ್ದಿರುವುದು ಸಾರಿಗೆ ಸಂಸ್ಥೆಯ ಬಸ್ಗಳ ನಿರ್ವಹಣೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಸ್ಗಳ ತಾಂತ್ರಿಕ ಸ್ಥಿತಿಯನ್ನು ಸಮರ್ಪಕವಾಗಿ ಪರಿಶೀಲಿಸದೆ ರಸ್ತೆಗಿಳಿಸಲಾಗುತ್ತಿದೆಯೇ ಎಂಬ ಆತಂಕ ವ್ಯಕ್ತವಾಗಿದೆ.
ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಸ್ಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗದಂತೆ ನಿಯಮಿತ ತಾಂತ್ರಿಕ ತಪಾಸಣೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದರೂ, ಈ ಘಟನೆ ಸಾರ್ವಜನಿಕ ಸಾರಿಗೆ ವಾಹನಗಳ ಸುರಕ್ಷತೆ ಮತ್ತು ನಿರ್ವಹಣೆಯ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ
