ಬೆಂಗಳೂರು: ಎಸ್ಎಸ್ಎಲ್ಸಿ ಹಾಗು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಮುಖ್ಯ ಪರೀಕ್ಷೆಗಳ ವ್ಯವಸ್ಥೆಗೆ ಈ ವರ್ಷದಿಂದ ಕೊಕ್ ನೀಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಮೂರು ಮುಖ್ಯ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದ್ರೆ ಈ ವರ್ಷದಿಂದ ಮೂರು ಪರೀಕ್ಷೆಗಳ ಬದಲಿಗೆ ಎರಡೇ ಮುಖ್ಯ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಈ ಹಿಂದೆ ತರಲಾಗಿದ್ದ ಮೂರು ಪರೀಕ್ಷೆಗಳ ನಿಯಮದಿಂದಾಗಿ ಇಲಾಖೆಯ ಸಿಬ್ಬಂದಿ ವರ್ಷದಲ್ಲಿ ಸುಮಾರು 7 ತಿಂಗಳ ಕಾಲ ಕೇವಲ ಪರೀಕ್ಷೆ, ಮೌಲ್ಯಮಾಪನ ಹಾಗೂ ಅಂಕಪಟ್ಟಿ ವಿತರಣೆಯ ಕೆಲಸಗಳಲ್ಲೇ ಮುಳುಗಬೇಕಾಗುತ್ತಿತ್ತು. ಇದು ಸಿಬ್ಬಂದಿಯ ಮೇಲೆ ಅತಿಯಾದ ಕೆಲಸದ ಒತ್ತಡವನ್ನು ಉಂಟುಮಾಡಿತ್ತು. ಅಷ್ಟೇ ಅಲ್ಲದೆ, ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ಗಳ ಅಡ್ಮಿಷನ್ ಪ್ರಕ್ರಿಯೆಗಳೂ ಕೂಡ ಸಾಕಷ್ಟು ತಡವಾಗುತ್ತಿದ್ದವು. ಹೀಗಾಗಿ ಈ ಮೂರನೇ ಪರೀಕ್ಷೆಯ ಜಂಜಾಟಕ್ಕೆ ಇಲಾಖೆ ಬ್ರೇಕ್ ಹಾಕಿದೆ.
ಈ ಹೊಸ ಪದ್ಧತಿಯು ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಎಂತಹ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
