ಬೆಂಗಳೂರು(ಮೇ 4): ಮೈಸೂರಿನ ಕೆ.ಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಮಾಜಿ ಸಚಿವ ಹೆಚ್ಡಿ ರೇವಣ್ಣವರನ್ನು ಎಸ್ಐಟಿ ಅಧಿಕಾರಿಗಳು ಇವತ್ತು ಸಂಜೆ ಅರೆಸ್ಟ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ,ನಾನು ಪೊಲೀಸರಿಗೆ ಕೇಳಿದ್ದೇನೆ. ನಾವು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾಕಂದರೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಯಾವುದೋ ಕಿಡ್ನಾಪ್ ಕೇಸ್ ನಲ್ಲಿ, ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಆ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿಲ್ಲ. ಜಾಮೀನು ಅರ್ಜಿ ವಜಾಗೊಂಡಿದೆ. ಅದಕ್ಕೆ ರೇವಣ್ಣರನ್ನ ಎಸ್ಐಟಿ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊ೦ಡಿರಬಹುದು ಅಂತ ನನಗೆ ಅನ್ಸುತ್ತೆ ಅಂತ ಸಿಎಂ ಸಿದ್ದರಾಮಯ್ಯ ಮಾಧ್ಯಮದವರಿಗೆ ಹೇಳಿದ್ದಾರೆ. ಕಿಡ್ನಾಪ್ ಆದ ಮಹಿಳೆ, ರೇವಣ್ಣ ಅವರ ತೋಟದ ಮನೆಯಲ್ಲಿ ಸಿಕ್ಕಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಿಎಂ, ಆ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ರೇವಣ್ಣರನ್ನ ಅರೆಸ್ಟ್ ಮಾಡಿದ್ದು ಯಾಕೆ?
ಮೈಸೂರಿನ ಕೆಆರ್ ನಗರದಲ್ಲಿ ಸಂತ್ರಸ್ತೆಯ ಮಗ ತನ್ನ ತಾಯಿ ಕಿಡ್ನಾಪ್ ಆಗಿದ್ದಾರೆ ಅಂತ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಈ ದೂರಿನನ್ವಯ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹುಣಸೂರು ತಾಲೂಕಿನ ಕಾಳೇನಳ್ಳಿಯಲ್ಲಿರುವ ರೇವಣ್ಣ ಆಪ್ತ ಸಹಾಯಕ ರಾಜಗೋಪಾಲ್ ತೋಟದಲ್ಲಿ ಶೋಧ ಕಾರ್ಯ ಮಾಡಿದಾಗ ಆಕೆ ಸಿಕ್ಕಿದ್ದಾರೆ. ಪೊಲೀಸರು ಆಕೆಯನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಬೆಂಗಳೂರಿಗೆ ಕರೆದು ತರುತ್ತಿದ್ದಾರೆ.
ಬೌರಿಂಗ್ ಆಸ್ಪತ್ರೆಗೆ ರೇವಣ್ಣ
ರೇವಣ್ಣರನ್ನ ಬೆಂಗಳೂರಿನ ಪದ್ಮನಾಭನಗರದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ನಿವಾಸದಿಂದ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಸ್ಐಟಿ ಅಧಿಕಾರಿಗಳು ದೇವೇಗೌಡರ ಮನೆಗೆ ಬಂಧಿಸಲು ಹೋದಾಗ ಖುದ್ದು ರೇವಣ್ಣ ಅವರೇ ಬಾಗಿಲು ತೆಗೆದು ಅಧಿಕಾರಿಗಳ ಜೊತೆ ಭಾರವಾದ ಹೆಜ್ಜೆ ಹಾಕಿ ವಿಚಾರಣೆಗೆ ತೆರಳಿದ್ದಾರೆ. ಎಸ್ಐಟಿ ಅಧಿಕಾರಿಗಳು ರೇವಣ್ಣರನ್ನು ಮೊದಲು ಕಚೇರಿಗೆ ಕರೆದುಕೊ೦ಡು ಹೋಗಿದ್ದರು .ಅಲ್ಲಿಂದ ಆಂಬುಲೆನ್ಸ್ ಮೂಲಕ ಆರೋಗ್ಯ ತಪಾಸಣೆಗೆ ಬೌರಿಂಗ್ ಆಸ್ಪತ್ರೆಗೆ ಕರೆದುಕೊಡು ಹೋಗಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ರೇವಣ್ಣರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ವಿಚಾರಣೆ ಆರಂಭಕ್ಕೂ ಮೊದಲು ರೇವಣ್ಣರಿಗೆ ಏನಾದರೂ ಆರೋಗ್ಯ ಸಮಸ್ಯೆ ಇದೆಯಾ ? ಅವ್ರು ಫಿಟ್ ಆಗಿದ್ದಾರಾ ? ಅಂತ ವೈದ್ಯರೇ ಹೇಳಬೇಕು. ಅದಾದ ನಂತರ ಎಸ್ಐಟಿ ಅಧಿಕಾರಿಗಳು ವಿಚಾರಣೆಯನ್ನ ಮಾಡಬಹುದು.