ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್ನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ನಡುರಸ್ತೆಯಲ್ಲೇ ಕಾಣಿಸಿಕೊಂಡ ಕಾಡಾನೆ ಎಲ್ಲಿ ದಾಳಿ ಮಾಡುತ್ತೋ ಅನ್ನೋ ಭಯದಲ್ಲೇ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ. ಒಂಟಿ ಸಲಗದ ಓಡಾಟದಿಂದ ವಾಹನ ಸವಾರರು ಗಲಿಬಿಲಿಗೊಂಡಿದ್ದಾರೆ.
ಚಾರ್ಮಾಡಿ ಘಾಟ್ ನ ಎರಡನೇ ತಿರುವಿನ ರಸ್ತೆಯಲ್ಲಿ ಒಂಟಿ ಸಲಗ ತಿರುಗಾಡುತ್ತಿದ್ದ ದೃಶ್ಯ ಕಂಡುಬಂದಿದೆ. ಇದ್ರಿಂದ ಸವಾರರು ಗಾಬರಿಯಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಕೆಲಹೊತ್ತು ದೂರದಲ್ಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಳೆದ ಏಪ್ರಿಲ್‌ನಲ್ಲೂ ಚಾರ್ಮಾಡಿ ಘಾಟ್‌ನಲ್ಲಿ ಕಾಡಾನೆ ಪ್ರತ್ಯಕ್ಷಗೊಂಡಿತ್ತು. ಇಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದ್ರೆ ಕಾಡಾನೆಗಳ ಸಂಚಾರದಿಂದ ಜನ ಓಡಾಡೋಕೆ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.