ಬೆಂಗಳೂರು: ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್ ಐ ಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಹೆಚ್ ಡಿ ರೇವಣ್ಣ ಅವರ ಎಸ್ ಐಟಿ ಕಸ್ಟಡಿ ನಿನ್ನೆಗೆ ಅಂತ್ಯವಾದ ಹಿನ್ನೆಲೆ ಅವರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಹೆಚ್.ಡಿ ರೇವಣ್ಣಗೆ, ಕೋರ್ಟ್ ಇಂದು 7 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಬಳಿಕ ಅವರನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಪೊಲೀಸರು ಶಿಫ್ಟ್ ಮಾಡಲಾಗಿದೆ. ಈಗ ಕೇಂದ್ರ ಕಾರಾಗೃಹದಲ್ಲಿರುವಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕೈದಿ ನಂ.4567 ಆಗಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋದಲ್ಲಿ ಸಂತ್ರಸ್ತೆಯಾಗಿದ್ದಂತ ಮಹಿಳೆಯೊಬ್ಬರನ್ನು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡ್ನ್ಯಾಪ್ ಮಾಡಿಸಿದ್ದಾರೆ ಎಂಬುದಾಗಿ ಮೈಸೂರಿನ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಅವರ ಪುತ್ರ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಹೆಚ್.ಡಿ ರೇವಣ್ಣ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿತ್ತು. ಈ ಕೇಸ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ರೂ, ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.
ಎಸ್‌ಐಟಿ ಅಧಿಕಾರಿಗಳು ಬಂಧನದ ಬಳಿಕ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಇಂದಿನವರೆಗೆ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದರು. ಇಂದು ಎಸ್‌ಐಟಿ ವಶಕ್ಕೆ ನೀಡಲಾಗಿದ್ದಂತ ಕಾಲಾವಧಿ ಅಂತ್ಯಗೊಂಡ ಹಿನ್ನಲೆಯಲ್ಲಿ ಮತ್ತೆ ಕೋರ್ಟ್ ಗೆ ಶಾಸಕ ಹೆಚ್.ಡಿ ರೇವಣ್ಣ ಅವರನ್ನು ಹಾಜರುಪಡಿಸಲಾಗಿತ್ತು.
ಬೆಂಗಳೂರಿನ 17ನೇ ಎಸಿಎಂಎಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ, ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಮೇ.14ರವರೆಗೆ 7 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಹೀಗಾಗಿ ಅವರನ್ನು ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಿದ್ದರು. ಪರಪ್ಪನ ಅಗ್ರಹಾರ ಜೈಲು ಸೇರಿರುವಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಜೈಲು ಅಧಿಕಾರಿಗಳು ವಿಚಾರಾಣಾಧಿನ ಕೈದಿಗೆ ನೀಡುವಂತೆ ಕೈದಿ ನಂಬರ್ 4567 ಸಂಖ್ಯೆಯನ್ನು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.