ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ರಾಜಕೀಯ ನಾಯಕರು ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿರುವ ಈ ಪ್ರಕರಣದಲ್ಲಿ ಬಿಜೆಪಿ ನಾಯಕರು, ಕಾಂಗ್ರೆಸ್ ಮುಖಂಡರು,ವಕೀಲ, ಮಾಜಿ ಕಾರ್ ಚಾಲಕನ ಹೆಸರು ಕೇಳಿ ಬರುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ಎಸ್‌ಐಟಿ ತನಿಖೆ ನಡೆಯುತ್ತಿದೆ. ಆದ್ರೆ ಎಸ್‌ಐಟಿ ತನಿಖೆ ಬಗ್ಗೆ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದು, ಇಂದು ಮಧ್ಯಾಹ್ನ 3ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ತನಿಖೆಯನ್ನು ಎಸ್‌ಐಟಿ ಪಾರದರ್ಶಕವಾಗಿ ನಡೆಸುತ್ತಿಲ್ಲ ಎಂದು ದೂರು ನೀಡಿದೆ. ಅಲ್ಲದೇ ಈ ಪ್ರಕರಣವನ್ನು ಸಿಬಿಐಗೆ ಹಸ್ತಾತರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕುಮಾರಸ್ವಾಮಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಕುಮಾರಸ್ವಾಮಿ ಆರೋಪ
ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣದ ತನಿಖೆಯನ್ನು SIT ಮಾಡುತ್ತಿದೆ. ಆದರೆ ತನಿಖೆ ಪಾರದರ್ಶಕವಾಗಿ ಆಗುತ್ತಿಲ್ಲ. ಎಸ್ ಐಟಿ ಎಂದರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಟೀಮ್ ಆಗಿದ್ದು ಈ ಸಂಸ್ಥೆ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ ಹಾಗೆ ಕೆಲಸ ಮಾಡುತ್ತಿದೆ. ರಾಜಕೀಯ ಷಡ್ಯಂತ್ರ ಮಾಡಿ ಒಂದು ಕುಟುಂಬದ ವಿರುದ್ಧ ಸರ್ಕಾರ ದಾಳಿ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಪೆನ್ ಡ್ರೈವ್ ವೈರಲ್ ಮಾಡಿದ್ದು ಡಿಸಿಎಂ ಡಿಕೆ ಶಿವಕುಮಾರ್. ಈ ಪ್ರಕರಣದಲ್ಲಿ ಅವರು ನೇರವಾಗಿ ಭಾಗಿಯಾಗಿದ್ದಾರೆ ಅಂತ HDK ಕಿಡಿಕಾರಿದ್ದರು. ಹೀಗಾಗಿ ಈ ಸಂಸ್ಥೆ ಮೇಲೆ ತನಗೆ ನಂಬಿಕೆ ಇಲ್ಲ. ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.

ರೇವಣ್ಣ – ನಮ್ಮ ಕುಟುಂಬ ಅಲ್ಲ ಅಂದಮೇಲೆ ಈಗ್ಯಾಕೆ ವಕಾಲತ್ತು?
ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೇಯ ಕೃತ್ಯವನ್ನ ಗೌರವಾನ್ವಿತ ಮಣ್ಣಿನ ಮಗ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಮಾಡಿದ್ದಾನೆ ಅಂತ ಜನ ಆಕ್ರೋಶ ವ್ಯಕ್ತಪಡಿಸಿದಾಗ ಕುಮಾರಸ್ವಾಮಿಯವರು ಮಧ್ಯಪ್ರವೇಶಿಸಿದರು. ಪ್ರಜ್ವಲ್ ಗೂ ನಮಗೂ ಯಾವುದೇ ಸಂಬಂಧವಿಲ್ಲ ಅಂತ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರು. ನನ್ನ ಕುಟುಂಬ ಅಂದರೆ ಅದು ಕೇವಲ ನನ್ನ ಮತ್ತು ದೇವೇಗೌಡರ ಕುಟುಂಬ ಅಷ್ಟೇ. ರೇವಣ್ಣ ಆಗಲಿ ಪ್ರಜ್ವಲ್ ಆಗಲಿ , ಇಬ್ಬರು ನಮ್ಮ ಕುಟುಂಬ ಅಲ್ಲ ಎಂದು ಹೇಳಿದ್ದರು. ದೊಡ್ಡ ಗೌಡರು ಮತ್ತು ನನ್ನ ಹೆಸರನ್ನು ಇದರಲ್ಲಿ ಎಳೆದು ತರಬೇಡಿ ಎಂದು ಮನವಿ ಮಾಡಿದ್ದರು. ನಮ್ಮ ಕುಟುಂಬ ಅಲ್ಲ ಅಂದ ಮೇಲೆ ಅವರ ಪರವಾಗಿ ಯಾಕೆ ವಕಾಲತ್ತು ವಹಿಸುತ್ತಿದ್ದೀರಾ ಎಂದು ಡಿಕೆಶಿ ವ್ಯ೦ಗ್ಯವಾಡಿದ್ದಾರೆ.

ಸದ್ಯ ಮಹಿಳೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಮೇ ೧೪ ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಿದ್ದು, ಇವರ ವಿರುದ್ಧ ಲುಕ್ ಔಟ್ ನೋಟೀಸ್ ಮತ್ತು ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಲಾಗಿದೆ.