ಬೆಂಗಳೂರು: ಹಾಸನ ಪೈನ್ ಡ್ರೈವ್ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕರೆತರಲು ಎಸ್ ಐಟಿ ತಂಡ ವಿದೇಶಕ್ಕೆ ಹೋಗುವುದಿಲ್ಲ. ಇಂಟರ್‌ಪೋಲ್ ಅವರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು ಪ್ರಜ್ವಲ್ ರೇವಣ್ಣ ಅವರನ್ನು ಕರೆತರಲು ವಿದೇಶಕ್ಕೆ ತೆರಳುವ ಯಾವುದೇ ಆಯ್ಕೆ ಇಲ್ಲ. ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ಇಂಟರ್ ಪೋಲ್ ಮಾಹಿತಿ ಹಂಚಿಕೊಳ್ಳಲಿದೆ. ಪ್ರಜ್ವಲ್ ಪತ್ತೆಯಾದ ದೇಶದವರು ಇಂಟರ್‌ಪೋಲ್ ಗೆ ತಿಳಿಸುತ್ತಾರೆ, ನಂತರ ನಮ್ಮ ಏಜೆನ್ಸಿಗಳು, ಸಿಬಿಐ ತಿಳಿದು ಅವರ ಮೂಲಕ ನಾವು ತಿಳಿದುಕೊಳ್ಳುತ್ತೇವೆ. ಇಲ್ಲಿಯವರೆಗೆ ಪ್ರಜ್ವಲ್ ಕುರಿತು ಯಾವುದೇ ಮಾಹಿತಿ ಇಲ್ಲ’ ಎಂದಿದ್ದಾರೆ.
ಇನ್ನು ಸೂಕ್ಷ್ಮವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದು ಅಥವಾ ಮಾಹಿತಿಯನ್ನು ಹಂಚಿಕೊಳ್ಳುವ ಬಗ್ಗೆ ರಾಜಕೀಯ ಮುಖಂಡರಿಗೆ ಎಚ್ಚರಿಕೆಯನ್ನೂ ಗೃಹ ಸಚಿವರು ನೀಡಿದ್ದಾರೆ.