ಹಾಸನ: ಹೊಳೆನರಸೀಪುರಲ್ಲಿ ಮನೆಕೆಲಸದಾಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರೇವಣ್ಣಗೆ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ. ರೇವಣ್ಣಗೆ ನೀಡಿದ್ದ ಮಧ್ಯಂತರ ಜಾಮೀನನ್ನು 42ನೇ ಎಸಿಎಂಎಂ ನ್ಯಾಯಾಲಯ ಸೋಮವಾರದವರೆಗೆ ಮುಂದುವರಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಸೋಮವಾರ ಮೇ20 ಕ್ಕೆ ಕಾಯ್ದಿರಿಸಿದೆ.
ಇದು ಜಾಮೀನು ಸಹಿತ ಪ್ರಕರಣ ಆಗಿದ್ದರಿಂದ ಗುರುವಾರ ಎಚ್.ಡಿ. ರೇವಣ್ಣ ಖುದ್ದು ನ್ಯಾಯಾಲಯದಲ್ಲಿ ಹಾಜರಾಗಿ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ರೇವಣ್ಣಗೆ ಒಂದು ದಿನದ ಮಟ್ಟಿಗೆ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿತ್ತು. ಇವತ್ತು ಮತ್ತೆ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಮೇ 20ಕ್ಕೆ ಕಾಯ್ದಿರಿಸಿ ಆದೇಶ ಹೊರಡಿಸಿದೆ. ರೇವಣ್ಣ ಪರ ಸಿ ವಿ ನಾಗೇಶ್ ವಾದ ಮಂಡಿಸಿದ್ರೆ, ಎಸ್ ಐಟಿ ಪರವಾಗಿ ಜಾಯ್ನಾ ಕೊಠಾರಿ ವಾದ ಮಂಡಿಸಿದರು .ಯಾವುದೇ ಕಾರಣಕ್ಕೂ ರೇವಣ್ಣ ಅವರಿಗೆ ಜಾಮೀನು ನೀಡಬಾರದು ಎಂದು ಎಸ್ ಐಟಿ ಪ್ರಬಲ ವಾದ ಮಂಡಿಸಿತು. ಎರಡು ಕಡೆಯ ವಾದ ಪ್ರತಿವಾದ ಆಲಿಸಿದ ನಂತರ 42ನೇ ಎಸಿಎಂಎಂ ನ್ಯಾಯಾಲಯ ಸೋಮವಾರಕ್ಕೆ ತೀರ್ಪನ್ನು ಕಾಯ್ದಿರಿಸಿದೆ.