ತ್ರಿನಯನಿ ನಟಿ ಪವಿತ್ರಾ ಜಯರಾಮ್ ಜೊತೆ ಆಪ್ತವಾಗಿದ್ದ ಕಿರುತೆರೆ ನಟ ಚಂದು (ಮೇ18 )ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಆಪ್ತ ಗೆಳತಿ ಪವಿತ್ರಾ ಜಯರಾಮ್ ಸಾವಿನ ನಂತರ ಚಂದು ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ . ಗೆಳತಿ ಪವಿತ್ರಾ ಜಯರಾಮ್ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ತೆಲಂಗಾಣದ ಮಣಿಕೊಂಡದಲ್ಲಿರುವ ತಮ್ಮ ಫ್ಲಾಟ್ ನಲ್ಲಿ ನೇಣಿಗೆ ಶರಣಾಗಿದ್ದಾರೆ.

ಪವಿತ್ರ ಸಾವಿನ ನಂತರ ಚಂದು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಅಲ್ಲದೆ ಸೋಷಿಯಲ್ ಮಿಡಿಯದಲ್ಲೂ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು. ಮೇ 12 ರಂದು, ಅಪಘಾತದಲ್ಲಿ ಮೃತಪಟ್ಟಿದ್ದ ನಟಿ ಪವಿತ್ರಾ ಜಯರಾಮ್ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಚಂದು ಹೈದರಾಬಾದ್ ನಿಂದ ಮಂಡ್ಯಕ್ಕೆ ಬಂದಿದ್ದರು. ಈ ವೇಳೆ ಇಬ್ಬರ ಸ್ನೇಹದ ಬಗ್ಗೆ, ಭಾವುಕವಾಗಿ ಮಾತನಾಡಿದ್ದರು.

ತೆಲುಗಿನ ಜನಪ್ರಿಯ ‘ತ್ರಿನಯನಿ’ ಧಾರಾವಾಹಿ ಸೇರಿದಂತೆ ಪವಿತ್ರ ಮತ್ತು ಚಂದು ಹಲವಾರು ಸೀರಿಯಲ್ ಗಳಲ್ಲಿ ಒಟ್ಟಿಗೆ ನಟಿಸಿ ಮನೆಮಾತಾಗಿದ್ದರು.ಇತ್ತೀಚೆಗೆ ಚಂದು ಪವಿತ್ರಾ ಜಯರಾಮ್ ಜೊತೆ ಬೆಂಗಳೂರಿಗೂ ಬಂದಿದ್ದರು. ಬೆಂಗಳೂರಿನಲ್ಲಿ ಸಿನಿಮಾವೊಂದಕ್ಕೆ ಸಹಿ ಮಾಡಿ ಹಿಂದಿರುಗುವಾಗ ಕಾರು ಅಪಘಾತ ಸಂಭವಿಸಿತ್ತು. ಒಂದೇ ಕಾರಿನಲ್ಲಿ ಪವಿತ್ರ , ಚಂದು ಸೇರಿದಂತೆ ಮತ್ತಿಬ್ಬರು ಪ್ರಯಾಣಿಸುತ್ತಿದ್ದಾಗ ಏಕಾಏಕಿ ಅಪಘಾತ ಸಂಭವಿಸಿ ಚಂದುಗೆ ಕೈಗೆ ಗಂಭೀರವಾಗಿ ಪೆಟ್ಟಾಗಿತ್ತು. ಅದನ್ನು ನೋಡಿದ ತಕ್ಷಣ ಪವಿತ್ರ ಗಾಬರಿಗೊಂಡು ಅವರ ಉಸಿರು ನಿಂತು ಹೋಗಿತ್ತು ಎಂದು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಚಂದು ಹೇಳಿಕೊಂಡಿದ್ದರು. ಅಲ್ಲದೆ ತನಗೂ ಮೆದುಳಿನ ಕೆಲ ಆರೋಗ್ಯ ಸಮಸ್ಯೆ ಇದ್ದು, ನಾನು ಯಾವಾಗ ಬೇಕಾದರೂ ಸಾಯಬಹುದು ಎಂದು ಹೇಳಿದ್ದರು.

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಚಂದು, ಸೀರಿಯಲ್ ಸೀನ್ ಗಾಗಿ ನೇಣು ಹಾಕಿಕೊಂಡಿದ್ದ ವಿಡಿಯೋ ಶೇರ್ ಮಾಡಿದ್ದರು. 2023 ರಲ್ಲಿ ಸೀರಿಯಲ್ ಒಂದರ ಸನ್ನಿವೇಶದಲ್ಲಿ ಚಂದು ನೇಣು ಹಾಕಿಕೊಂಡ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಮಾಹಿತಿ ಪ್ರಕಾರ 2015 ರಲ್ಲಿ ಶಿಲ್ಪರನ್ನು ಪ್ರೀತಿಸಿ ಚಂದು ಮದುವೆಯಾಗಿದ್ದರು. ಇವರಿಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ. ಚಂದು ಮನೆಯವರು ಕರೆ ಮಾಡಿದಾಗ ಚಂದು ಫೋನ್ ಪಿಕ್ ಮಾಡದೇ ಇದ್ದಾಗ, ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರು ಬಂದು ಬಾಗಿಲು ಒಡೆದು ಒಳ ಹೋಗಿ ನೋಡಿದಾಗ, ಚಂದು ಆತ್ಮಹತ್ಯೆ ಮಾಡಿಕೊಂಡಿರೋ ವಿಷಯ ಬೆಳಕಿಗೆ ಬಂದಿದೆ. ಸದ್ಯ ಪವಿತ್ರಾ ಮತ್ತು ಚಂದು ಇಬ್ಬರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರು , ಅಭಿಮಾನಿಗಳಿಗೆ ಮತ್ತು ತ್ರಿನಯನಿ ಧಾರವಾಹಿ ತಂಡಕ್ಕೆ ಆಘಾತ ಎದುರಾಗಿದೆ. ಹೈದರಾಬಾದ್ನ ನಾರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.