ಚಿಕ್ಕಮಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದೆ. ಅಂತೆಯೇ ಮಲೆನಾಡು ಭಾಗದಲ್ಲೂ ಧಾರಾಕಾರ ಮಳೆ ಸುರಿಯುತ್ತಿದೆ. ಇನ್ನು ಕಾಫಿನಾಡಿನ ಬಯಲುಸೀಮೆಯಲ್ಲೂ ಮಳೆ ಅಬ್ಬರ ಜೋರಾಗಿದ್ದು ಕೆಲ ಅನಾಹುತಗಳು ಸಂಭವಿಸಿದೆ.

ಭಾರೀ ಮಳೆಗೆ ಇದ್ದಕ್ಕಿದ್ದಂತೆ ಹಳ್ಳ ಬಂದಿದ್ದರಿಂದ ಹಿಟಾಚಿಯೊಂದು ಸಂಪೂರ್ಣವಾಗಿ ಮುಳುಗಿದ ದೃಶ್ಯ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ತ್ಯಾಗದಬಾಗಿ ಗ್ರಾಮದಲ್ಲಿ ಕಂಡುಬಂದಿದೆ. ಕೆಮ್ಮಣ್ಣುಗುಂಡಿ-ಕಲ್ಲತ್ತಿಗರಿ ಭಾಗದಲ್ಲಿ ಭಾರೀ ಮಳೆಯಾಗ್ತಿದ್ದು, ಇದ್ದಕ್ಕಿದ್ದಂತೆ ಹಳ್ಳದಲ್ಲಿ ನೀರು ಹೆಚ್ಚಾಗಿ ಹಿಟಾಚಿ ಮುಳುಗಿ ಹೋಗಿದೆ.

ತ್ಯಾಗದ ಬಾಗಿ ಗ್ರಾಮದಲ್ಲಿ ಸೇತುವೆ ಇಕ್ಕೆಲಗಳನ್ನ ಕ್ಲೀನ್ ಮಾಡುವಾಗ ಹಳ್ಳದಲ್ಲಿ ನೀರು ಹೆಚ್ಚಾಗಿ ನೋಡ-ನೋಡುತ್ತಿದ್ದಂತೆ ಹಿಟಾಚಿ ಮುಳುಗುತ್ತಿದ್ದು, ಅದನ್ನ ಮೇಲೆ ತರಲು ಯತ್ನಿಸಿದರೂ ಸಾಧ್ಯವಾಗಿಲ್ಲ. ನೀರಿನ ಪ್ರಮಾಣ ಜಾಸ್ತಿಯಾಗುತ್ತಲೇ, ಹಿಟಾಚಿ ಕೂಡ ಅರ್ಧ ಮುಳುಗಿತ್ತು. ಆಗ ಹಿಟಾಚಿಯನ್ನು ಅಲ್ಲೇ ಬಿಟ್ಟು, ಬಂದು ಕಾರ್ಮಿಕರು ಪ್ರಾಣ ಉಳಿಸಿಕೊಂಡು ಅಪಾಯದಿಂದ ಪಾರಾಗಿದ್ದಾರೆ. ಈಗ ಹಿಟಾಚಿ ಮೇಲೆ ತರೋದು ಅಸಾಧ್ಯದ ಮಾತಾಗಿದೆ. ಮಳೆ ಕಡಿಮೆ ಆಗುವವರೆಗೂ ಹಳ್ಳದಲ್ಲೇ ಹಿಟಾಚಿ ಲಾಕ್ ಆಗಿರಲಿದೆ.