
ಚಿಕ್ಕಮಗಳೂರು/ತರೀಕೆರೆ: ಹಾವು ಕಚ್ಚಿದ್ದನ್ನ ಮುಳ್ಳು ಚುಚ್ಚಿದೆ ಅಂತಾ ಭಾವಿಸಿ ರಾತ್ರಿ ಮಲಗಿದ್ದ ವ್ಯಕ್ತಿ ಬೆಳಗ್ಗೆ ಸಾವನ್ನಪ್ಪಿರುವ ಅಚ್ಚರಿಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ. ಗಣ್ಯ ನಾಯ್ಕ್(44) ಮೃತ ದುರ್ದೈವಿ. ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದ್ದು, ಕೆಲಸದಲ್ಲಿ ಮಗ್ನವಾಗಿದ್ದ ವ್ಯಕ್ತಿಗೆ ಹಾವು ಕಚ್ಚಿರುವುದೇ ಗಮನಕ್ಕೆ ಬಂದಿಲ್ಲ. ರಾತ್ರಿ ಮನೆಗೆ ಬಂದ ಗಣ್ಯ ನಾಯ್ಕ್, ಮನೆಯವರಿಗೆ ಮುಳ್ಳು ಚುಚ್ಚಿದೆ ಅಂತಾ ಹೇಳಿ ರಾತ್ರಿ ಊಟ ಮಾಡಿ ಮಲಗಿದ್ದಾರೆ. ಆದ್ರೆ ಬೆಳಗ್ಗೆ ತುಂಬಾ ಸಮಯವಾದ್ರೂ ಹಾಸಿಗೆಯಿಂದ ಏಳದೇ ಇದ್ದದ್ದನ್ನ ನೋಡಿ, ಮನೆಯವರು ಎಬ್ಬಿಸಿದಾಗ ಸಾವನ್ನಪ್ಪಿರುವುದು ಗೊತ್ತಾಗಿದೆ.

ಮುಳ್ಳು ಚುಚ್ಚಿದೆ ಅಂತಾ ನಿರ್ಲಕ್ಷಿಸಿದ್ದೇ ಸಾವಿಗೆ ಕಾರಣ
ಹಾವು ಕಚ್ಚಿದ್ರೂ ಮುಳ್ಳು ಚುಚ್ಚಿದೆ ಅಂತಾ ನಿರ್ಲಕ್ಷಿಸಿದ್ದೇ ಇದೀಗ ಗಣ್ಯ ನಾಯ್ಕ್ ಜೀವ ಹೋಗಲು ಕಾರಣವಾಗಿದೆ. ಒಂದು ವೇಳೆ ಆಗಲೇ ಎಚ್ಚೆತ್ತುಕೊಂಡಿದ್ರೆ, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ರೆ ಸಾವು ತಪ್ಪಿಸಬಹುದಿತ್ತೆನೋ.? ಆದ್ರೆ ಹಾವು ಕಚ್ಚಿದ್ರೂ ಗಮನ ನೀಡದೇ ಇದ್ದಿದ್ದು ಇಂದು ಅಮೂಲ್ಯ ಜೀವವನ್ನ ಕಳೆದುಕೊಳ್ಳುವಂತಾಗಿದೆ. ಗಣ್ಯ ನಾಯ್ಕ್ ಈ ರೀತಿ ಸಾವನ್ನಪ್ಪಿರೋದನ್ನ ಕಂಡು ಮನೆಯವರು, ಸಂಬಂಧಿಕರು ಮಮ್ಮುಲ ಮರುಗಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ
