ಬೆಂಗಳೂರು; ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಮೊನ್ನೆಯಷ್ಟೇ ವೀಡಿಯೋ ಮೂಲಕ ಪ್ರತ್ಯಕ್ಷವಾಗಿ ಮೇ.31 ರಂದು ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗೋದಾಗಿ ಹೇಳಿದ್ದರು. ಅದರ ಬೆನ್ನಲ್ಲೇ ಇದೀಗ ಭಾರತಕ್ಕೆ ಬರಲು ಮತ್ತೆ ಟಿಕೆಟ್ ಬುಕ್ ಮಾಡಿದ್ದಾರೆ ಎನ್ನಲಾಗಿದೆ. ಜರ್ಮನಿಯ ಮ್ಯೂನಿಕ್ ನಿಂದ ಲುಫ್ತಾನ್ಸಾ ಏರ್ಲೈನ್ಸ್ ಮೂಲಕ ಬೆಂಗಳೂರಿಗೆ ವಾಪಾಸ್ ಬರುತ್ತಿದ್ದಾರೆ ಎನ್ನಲಾಗಿದೆ.ಇದೆ ತಿಂಗಳು ಮೇ 30ರ ಮಧ್ಯರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೀಗಾಗಿ SIT ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲೆ ಠಿಕಾಣಿ ಹೂಡಿದ್ದು ,ಪ್ರಜ್ವಲ್ ರೇವಣ್ಣರನ್ನು ಏರ್ಪೋರ್ಟ್ ನಲ್ಲೆ ರಾತ್ರಿಯೇ ಬಂಧಿಸಲು ಸಜ್ಜಾಗಿದ್ದಾರೆ . ಯಾಕಂದರೆ SIT ಅಧಿಕಾರಿಗಳ ಬಳಿ ಈಗಾಗಲೇ ಅರೆಸ್ಟ್ ವಾರಂಟ್ ಇದ್ದು, ವಶಕ್ಕೆ ಪಡೆದ ಬಳಿಕ ವಿಚಾರಣೆ ಮಾಡಿ, ಮೆಡಿಕಲ್ ಟೆಸ್ಟ್ ಮಾಡಿಸಿದ ನಂತ್ರ ಕೋರ್ಟ್ ಗೆ ಹಾಜರು ಪಡಿಸುತ್ತಾರೆ ಎನ್ನಲಾಗಿದೆ. ಈ ವೇಳೆ SIT ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ತಮ್ಮ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ .

ಸೋಮವಾರವಷ್ಟೇ ಪ್ರಜ್ವಲ್ ರೇವಣ್ಣ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಬಂದು ತನ್ನನ್ನು ದುರುದ್ದೇಶಪೂರ್ವಕವಾಗಿ ಸಿಲುಕಿಸಲಾಗಿದ್ದು, ಕಾಂಗ್ರೆಸ್ ನಾಯಕರ ಆರೋಪದಿಂದಾಗಿ ಖಿನ್ನತೆಗೆ ಒಳಗಾಗಿದ್ದೇನೆ ಎಂದಿದ್ದರು. ಅಲ್ಲದೆ ತಾನು ಮೇ 31ರಂದು ಯಾವ ದೇಶದಲ್ಲೇ ಇದ್ದರು , ತನಿಖೆಗೆ ಹಾಜರಾಗಿ ಸಂಪೂರ್ಣವಾಗಿ ಸಹಕರಿಸುತ್ತೇನೆ ಎಂದಿದ್ದರು . ತನ್ನ ಮೇಲೆ ಆರೋಪ ಬಂದಿರೋದ್ರಿಂದಾಗಿ ತನ್ನ ತಾತ, ಕುಟುಂಬ ಹಾಗು ಕಾರ್ಯಕರ್ತರಿಗೆ ಕ್ಷಮೆ ಕೇಳಿದ್ದರು.

ಒಟ್ನಲ್ಲಿ ಅಶ್ಲೀಲ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅನೇಕ ಸಲ ಟಿಕೆಟ್ ಬುಕ್ ಮಾಡಿ, ಕ್ಯಾನ್ಸಲ್ ಮಾಡುತ್ತಿದ್ದರು. ಹೀಗಾಗಿ ಶುಕ್ರವಾದರೂ ವಿಚಾರಣೆಗೆ ಭಾರತಕ್ಕೆ ಬರ್ತಾರಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.
