ಹಾಸನ: ಹಾಸನ ಪೆನ್‌ಡ್ರೈವ್ ಪ್ರಕರಣ ಸಂಬಂಧ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಮೇ 31 ರಂದು ಎಸ್‌ಐಟಿ ಮುಂದೆ ಹಾಜರಾಗ್ತೀನಿ ಎಂದು ಹೇಳಿದ ಬೆನ್ನಲ್ಲೇ ಇತ್ತ ಎಸ್‌ಐಟಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಪ್ರಜ್ವಲ್ ಬೆಂಗಳೂರಿಗೆ ಬರುವ ದಿನ ಹತ್ತಿರವಾಗ್ತಿದ್ದಂತೆ ಎಸ್ ಐಟಿ ತಂಡ ತನಿಖೆ ಚುರುಕುಗೊಳಿಸಿದೆ. ಹಾಸನದ ಪ್ರಜ್ವಲ್ ನಿವಾಸದಲ್ಲಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ.

ಹೌದು ಪ್ರಜ್ವಲ್ ರೇವಣ್ಣರ ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ನಿವಾಸಕ್ಕೆ ಎಸ್‌ಐಟಿ ಮತ್ತು ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಸತತ 10 ಗಂಟೆಗಳ ಕಾಲ ಪರಿಶೀಲನೆ ನಡೆಸಿದೆ. ಪ್ರಜ್ವಲ್ ಮಲಗುತ್ತಿದ್ದ ರೂಂನಲ್ಲಿರುವ ಹಾಸಿಗೆ, ದಿಂಬು, ಹೊದಿಕೆಯನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ತೆರಳಿದ್ದಾರೆ. ಇನ್ನು ಮೊನ್ನೆಯಷ್ಟೇ ವಿಡಿಯೋ ಮೂಲಕ ಮೇ 31ರ ಬೆಳಗ್ಗೆ 10:30ಕ್ಕೆ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗ್ತೀನಿ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದು, ಇತ್ತ ಎಸ್‌ಐಟಿ ಪ್ರಜ್ವಲ್ ಬಂಧನಕ್ಕೆ ಸಿದ್ಧತೆ ನಡೆಸುತ್ತಿದೆ.