ಸ್ಯಾಂಡಲ್ವುಡ್ ನಟ ಕಿಶೋರ್ , ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ಯಾವಾಗಲು ಕೌಂಟರ್ ಕೊಡುತ್ತಿರುತ್ತಾರೆ, ಕಟುಟೀಕೆಯನ್ನು ಮಾಡುತ್ತಿರುತ್ತಾರೆ. ಇತ್ತೀಚಿಗೆ ಪ್ರಧಾನಿ ಮೋದಿ , ಮಹಾತ್ಮ ಗಾಂಧಿಯ ಕುರಿತು ಹೇಳಿಕೆ ನೀಡಿದ್ದರು. ಮಹಾತ್ಮ ಗಾಂಧೀಜಿ ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು. ಆದರೆ ಅವರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಫಸ್ಟ್ ಟೈಮ್ ಗಾಂಧಿ ಕುರಿತು ಸಿನಿಮಾ ಬಂದ ನಂತರವೇ ಇಡೀ ಜಗತ್ತಿಗೆ ಇವರ ಬಗ್ಗೆ , ಇವರು ಯಾರು ಅನ್ನೋದರ ಬಗ್ಗೆ ಜನರಿಗೆ ಚಿರಪರಿಚಿತರಾದರು ಎಂದು ಹೇಳಿದ್ದರು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಜನರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಗಾಂಧಿ ವಿಚಾರಕ್ಕೆ ಸಂಬಂಧಪಟ್ಟಂತೆ ಬಹುಭಾಷಾ ನಟ ಕಿಶೋರ್ ಇದೀಗ ಟೀಕೆ ಮಾಡಿದ್ದು ,ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ , ಕೆಲಸ ಮಾಡಲಾಗದ ಅಯೋಗ್ಯ ಮೋದಿಗೇನು ಹುಚ್ಚೇ ಎಂದು ಪ್ರಶ್ನೆ ಮಾಡಿದ್ದಾರೆ.
‘ಇದೇನು ಹುಚ್ಚೋ … ಹೊಲಸು ಕುತಂತ್ರವೋ? ತನ್ನ ಬೌದ್ಧಿಕ ದಿವಾಳಿತನ ಮತ್ತು ಕೆಲಸ ಮಾಡಲಾಗದ ಅಯೋಗ್ಯತೆಯನ್ನು, ನಿರುದ್ಯೋಗ,ಬೆಲೆಯೇರಿಕೆ, ಬಡತನ, ಮಣಿಪುರ, ಚೀನಾ, ಅಗ್ನಿವೀರ್, ರೈತ ಹೋರಾಟ, ನಗದು ಅಮಾನ್ಯೀಕರಣ, ಕೊರೋನ, ಅದಾನಿ, ಪಿಎಮ್ ಕೇರ್ಸ್, ಚುನಾವಣಾ ಬಾಂಡ್ ಹೀಗೆ ಹಲವು ನೈಜ ಸಮಸ್ಯೆ ಸೋಲುಗಳನ್ನೂ ಮುಚ್ಚಿಹಾಕಲು ಬಾಯಿಗೆ ಬಂದದ್ದು ಬೊಗಳುತ್ತಾ ಪ್ರತಿದಿನವೂ ಕಾನೂನು ಬಾಹಿರ ಪ್ರಚಾರವನ್ನೂ ಗಮನ ಬೇರೆಡೆ ತಿರುಗಿಸುವ ಈ ಕಳ್ಳ ಕೆಲಸವನ್ನೂ ಮಾಡುತ್ತಾ ಈ ವಿಕಸಿತ ಮಹಾಮಾನವ ಪರೀಕ್ಷಿಸುತ್ತಿರುವುದು ನಮ್ಮ ಬುದ್ಧಿಮತ್ತೆಯನ್ನ. ಈ ಮಾತುಗಳಿಂದ ಭ್ರಮಿತರಾಗಿ ಬರೀ ಈ ತಲೆಬುಡವಿಲ್ಲದ ಮಾತುಗಳ ಬಗ್ಗೆಯೇ ಗಮನವಿಡುತ್ತೇವೆಯೋ ಇಲ್ಲಾ ಮೂಲಭೂತ ಸಮಸ್ಯೆಗಳನ್ನು ಮರೆಯದೇ ಓಟು ಹಾಕುತ್ತೇವೆಯೋ ನಮ್ಮ ಬುದ್ಧಿವಂತಿಕೆಗೆ ಬಿಟ್ಟದ್ದು. ನಾವು ಮೂರ್ಖರಾದೆವೋ ಇಲ್ಲವೋ ತಿಳಿಯಲು ಜೂನ್ 4 ರ ವರೆಗೆ ಕಾದು ನೋಡಬೇಕಿದೆ’ ಎಂದು ನಟ ಕಿಶೋರ್ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ವಿಶೇಷವೆಂದರೆ ಈ ಹಿಂದೆಯೂ ಅನೇಕ ಬಾರಿ ನಟ ಕಿಶೋರ್ ಪ್ರಧಾನಿ ಮೋದಿಯವರನ್ನು ಕಟುವಾಗಿ ಟೀಕಿಸಿದ್ದಾರೆ. ತನ್ನ ಪೋಸ್ಟ್ ನಲ್ಲಿ , “ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರು ಹೇಳುವುದು ಮಹಾಪಾಪ” , ” ನೀವು ಸಾರ್ವಜನಿಕ ಜೀವನಕ್ಕೆ ಮಾತ್ರವಲ್ಲ , ಮನುಷ್ಯನಾಗಿರಲೇ ಅಯೋಗ್ಯ” “ಹಿಂದೂ ಧರ್ಮದ ಮಾನವನ್ನು ವಿಶ್ವದಲ್ಲಿ ಮೂರು ಕಾಸಿಗೆ ಹರಾಜು ಹಾಕಿದ ವ್ಯಕ್ತಿ ಮೋದಿ”, ಅತೀ ಕ್ರೂರ , ದುರಹಂಕಾರಿ , ಸುಳ್ಳುಗಾರ ಎಂದೆಲ್ಲ ಹೇಳಿದ್ದರು.